ಮಂಗಳೂರು: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರು 3ನೇ ವಾರ್ಡ್ನ ಮೂಡುಬಾಳಿಕೆ ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಎದುರಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ವತಿಯಿಂದ ಕಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಿರುವುದರಿಂದ ಈ ಕುಟುಂಬಗಳ ದೈನಂದಿನ ಜೀವನವೇ ಅಸ್ತವ್ಯಸ್ತವಾಗುವ ಭೀತಿ ಉಂಟಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಯ ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ. ಎಕ್ಕಾರು ಆರೋಪಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸುಮಾರು 70 ವರ್ಷಗಳಿಂದ ಈ ಕುಟುಂಬಗಳು ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, 1995ರಲ್ಲಿ ಸರ್ಕಾರದಿಂದ ಮನೆ ನಿವೇಶನದ ಹಕ್ಕುಪತ್ರವೂ ನೀಡಲಾಗಿದೆ. ಮನೆಗಳ ಸುತ್ತಲೂ ಖಾಸಗಿ ಜಮೀನುಗಳಿರುವ ಕಾರಣ ಸರ್ವೆ ನಂ.116/7ಕ್ಕೆ ಹೊಂದಿಕೊಂಡಿರುವ ಕಾಲುದಾರಿ ಹಾಗೂ ಕಚ್ಚಾ ರಸ್ತೆಯೇ ಈ ಕುಟುಂಬಗಳಿಗೆ ದೈನಂದಿನ ಸಂಚಾರ, ಮಕ್ಕಳ ವಿದ್ಯಾಭ್ಯಾಸ, ಅಗತ್ಯ ವಸ್ತುಗಳ ಸಾಗಣೆ ಮತ್ತು ತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ ಹಿರಿಯ ನಾಗರಿಕರನ್ನು ಕರೆದೊಯ್ಯುವ ಏಕೈಕ ಮಾರ್ಗವಾಗಿದೆ ಎಂದು ವಿವರಿಸಿದರು.

ಮಳೆಗಾಲದಲ್ಲಿ ಈ ಪ್ರದೇಶ ಸಂಪೂರ್ಣ ಜಲಾವೃತವಾಗುವುದರಿಂದ ಈ ರಸ್ತೆ ಇನ್ನಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಆದರೆ ಇತ್ತೀಚೆಗೆ ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ಸರ್ವೆ ನಂ.116/7ರಲ್ಲಿ ಕಂಪೌಂಡ್ ನಿರ್ಮಾಣ ಕಾರ್ಯ ಆರಂಭಿಸಿರುವುದರಿಂದ, ಈ ರಸ್ತೆ ಸಂಪೂರ್ಣವಾಗಿ ಮುಚ್ಚಲ್ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಈ ದಲಿತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಷ್ಟು ಮಾಹಿತಿ ನೀಡಿದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾ ಡಿ., ಈ ಸಮಸ್ಯೆ ಕುರಿತು ಸಂಸದರನ್ನು ಸಂಪರ್ಕಿಸಿದಾಗ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಬಳಿ ಹೋಗಲು ಯತ್ನಿಸಿದರೆ ಅವರು ಕಚೇರಿಯಲ್ಲಿ ಅಪರೂಪವಾಗಿ ಲಭ್ಯರಾಗುತ್ತಾರೆ. ಸ್ಥಳೀಯ ಶಾಸಕರನ್ನು ಸಂಪರ್ಕಿಸಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಕೋಸ್ಟ್ ಗಾರ್ಡ್ ಅಧಿಕಾರಿಗಳ ಬಳಿ ವಿಚಾರಿಸಿದರೆ ಮೊದಲೇ ಈ ಸಮಸ್ಯೆಯನ್ನು ತಿಳಿಸಬೇಕಿತ್ತೆಂದು ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು.
ಈ ಹಿಂದೆ ಕಂಪೌಂಡ್ ನಿರ್ಮಾಣಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ನಡೆದಾಗ ನಾವು ಮೌಖಿಕವಾಗಿ ವಿರೋಧ ವ್ಯಕ್ತಪಡಿಸಿದ್ದೆವು. ಆ ಸಂದರ್ಭದಲ್ಲಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗೆ ಯಾವುದೇ ತಡೆ ಉಂಟಾಗುವುದಿಲ್ಲ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಇದೀಗ ಕಂಪೌಂಡ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿರುವುದು ನಂಬಿಕೆ ದ್ರೋಹವಾಗಿದೆ ಎಂದು ಆಕ್ಷೇಪಿಸಿದರು.
ಕೂಡಲೇ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ದಲಿತ ಸಂಘರ್ಷ ಸಮಿತಿಯ ವತಿಯಿಂದ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರುಕ್ಕಯ್ಯ ಅಮೀನ್ ಕರಂಬಾರು, ಕೃಷ್ಣಾನಂದ ಡಿ., ಲಿಂಗಪ್ಪ ಕುಂದರ್, ಯಮುನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





