ಚಿಕ್ಕಮಗಳೂರು: ಕಲುಷಿತ ಆಹಾರ ಸೇವನೆಯಿಂದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಚಿಕ್ಕಮಗಳೂರು ನಗರದ ಪೊಲೀಸ್ ಬಡಾವಣೆಯಲ್ಲಿರುವ ಆಲ್ದೂರು ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಊಟ ಮಾಡಿದ ಬಳಿಕ ಮಕ್ಕಳಲ್ಲಿ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ.
ಘಟನೆಯ ವಿವರ: ಶನಿವಾರ ರಾತ್ರಿ ಊಟದ ಬಳಿಕ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. 25 ಮಕ್ಕಳು ಅಸ್ವಸ್ಥಗೊಂಡಿದ್ದು, ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ವಿದ್ಯಾರ್ಥಿಗಳ ಆರೋಪ: ವಸತಿ ಶಾಲೆಯ ಮಕ್ಕಳು ಊಟದಲ್ಲಿ ಹುಳಗಳು ಕಂಡುಬಂದಿದ್ದವು ಎಂದು ಆರೋಪಿಸಿದ್ದಾರೆ. ಊಟದಲ್ಲಿನ ಕಲುಷಿತ ಅಂಶದಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಡಳಿತ ಮಂಡಳಿ ಹೇಳಿಕೆ: ಈ ಘಟನೆ ಕುರಿತು ಶಾಲಾ ಆಡಳಿತ ಮಂಡಳಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳ ಪೋಷಕರು ಎಚ್ಚರಿಕೆ ನೀಡಿದ್ದಾರೆ.
