ತಮಿಳುನಾಡಿನಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳ ಎರಡು ದಿನಗಳ ಧಾರ್ಮಿಕ ಪ್ರವಾಸವು ನವೆಂಬರ್ 7 ಮತ್ತು 8ರಂದು ಭಕ್ತಿಭಾವದಿಂದ ಯಶಸ್ವಿಯಾಗಿ ನೆರವೇರಿತು.
ನವೆಂಬರ್ 7ರಂದು, ತಿರುಚನಾಪಳ್ಳಿ ಪ್ರದೇಶದ ಬಿ.ಹೆಚ್.ಇ.ಎಲ್ ನಿವೃತ್ತ ಹಿರಿಯ ಇಂಜಿನಿಯರ್ ಜೀವಣ್ಣರವರು ಸತ್ಸಂಗವನ್ನು ಆಯೋಜಿಸಿದ್ದರು. ಅಂದು ಕುಂಭಕೋಣದ ಸಮೀಪದ ಆದಿನಂ ಶೈವ ಸಂಸ್ಥಾನ ಮಠದ ಪರಮಾಚಾರ್ಯ ಶ್ರೀ ಕೈಲಾಯಿ ಮಸಿಲಮಣಿ ದೇಸಿಕ ಸ್ವಾಮೀಜಿಗಳ ಜನ್ಮದಿನ ಸುವರ್ಣ ವರ್ಷ ಮತ್ತು 27ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ನಡೆದ ಸಂತರ ಸಮಾವೇಶದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳು ಭಾಗವಹಿಸಿದರು.

ಅವರು ಮಾತನಾಡಿ, “ಧರ್ಮಕ್ಷೇತ್ರಗಳು ಮತ್ತು ಪ್ರಾಚೀನ ತೀರ್ಥಕ್ಷೇತ್ರಗಳು ಸನಾತನ ಧರ್ಮವನ್ನು ಒಗ್ಗೂಡಿಸಿ ಸುಸಂಸ್ಕೃತ ಹಾಗೂ ಸಭ್ಯ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಭಾರತೀಯ ಸನಾತನ ಧರ್ಮವು ವಿಶ್ವಮಾನ್ಯವಾದ ಮಾರ್ಗದರ್ಶಕ ಶಕ್ತಿ,” ಎಂದು ನುಡಿದರು.

ಈ ಸಮಾರಂಭದಲ್ಲಿ ಬೆಂಗಳೂರು ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಹರಿಹರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಬೆಳ್ಳಾರಿಯ ಕಲ್ಯಾಣ ಸ್ವಾಮೀಜಿ, ಬೆಂಗಳೂರು ಓಂ ಕಾರ ಆಶ್ರಮದ ಮಧುಸೂದನ ಸ್ವಾಮೀಜಿ, ಕಟಪಾಡಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಸೇರಿದಂತೆ ದಕ್ಷಿಣ ಭಾರತದ ಹಲವು ಮಠಗಳ ಪೂಜ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ನವೆಂಬರ್ 8ರಂದು, ಸ್ವಾಮೀಜಿಗಳು ಮನ್ನಾರಗುಡಿ, ದೀಪಗುಡಿ, ತಂಜಾವೂರು ಬಸದಿ ಹಾಗೂ ಪ್ರಸಿದ್ಧ ತಂಜಾವೂರು ಬ್ರಹದೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಮಾಡಿದರು.
ಈ ಧಾರ್ಮಿಕ ಯಾತ್ರೆಯಲ್ಲಿ ಸ್ವಾಮೀಜಿಯವರೊಂದಿಗೆ ರಾಮಕೃಷ್ಣ, ಬಾಬು, ರಾಜಶೇಖರ್ ಹಾಗೂ ಶೀತಲ್ ಪ್ರಸಾದ್ ಸಹಯಾತ್ರಿಗಳಾಗಿದ್ದರು


