ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಸ್ಕೂಟರ್ ಮೇಲೆ ಅಪಾಯಕಾರಿ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಯುವಕ ಇದೀಗ ಕಳ್ಳತನ ಯತ್ನ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದಾನೆ.
ಬಂಧಿತನನ್ನು ಪೌಜಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೋಣಮಕ್ಕಿ ಪ್ರದೇಶದಲ್ಲಿರುವ ಪಾತಿಮಾ ಎಂಬವರ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ವೇಳೆ ಪಾತಿಮಾ ಅವರು ಮನೆಯಲ್ಲಿ ಮಲಗಿದ್ದಾಗ ಆರೋಪಿ ಒಳನುಗ್ಗಿ ಗೋದ್ರೇಜ್ ಅಲಮಾರಿಯನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಶಬ್ದ ಕೇಳಿ ಎಚ್ಚರಗೊಂಡ ಪಾತಿಮಾ ಅವರು ಕೂಗುತ್ತಿದ್ದಂತೆ, ಆರೋಪಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದನು.
ಈ ಸಂಬಂಧ ಪಾತಿಮಾ ನೀಡಿದ ದೂರಿನ ಆಧಾರದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 30/2026 ರಂತೆ BNS ಕಲಂ 331(4), 305 ಮತ್ತು 62 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಮನಾರ್ಹವಾಗಿ, ಇದೇ ಆರೋಪಿ ಕೆಲ ದಿನಗಳ ಹಿಂದೆ ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಸ್ಕೂಟರ್ನಲ್ಲಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ನಡೆಸಿ, ಚಲಿಸುತ್ತಿದ್ದ ವಾಹನದಲ್ಲೇ ಸರ್ಕಸ್ ಶೈಲಿಯ ಸಾಹಸ ಪ್ರದರ್ಶಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

