ನವದೆಹಲಿ: ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಹಣಕಾಸು ವಿಧೇಯಕದ ಚರ್ಚೆಯಲ್ಲಿ ಭಾಗವಹಿಸಿ ಆರ್ಥಿಕತೆ, ರಾಷ್ಟ್ರೀಯ ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ವಿಚಾರಗಳನ್ನು ಮುಂದಿಟ್ಟರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್ಟಿ ಸುಧಾರಣೆಗಳು ದೇಶದ ಆರ್ಥಿಕತೆಯನ್ನು ಬಲಪಡಿಸಿರುವುದಾಗಿ ಅವರು ಶ್ಲಾಘಿಸಿದರು. ದೈನಂದಿನ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಇಳಿಕೆಯಿಂದ ಸಾಮಾನ್ಯ ಕುಟುಂಬಗಳಿಗೆ ಅನುಕೂಲವಾಗಿದ್ದು, ಸರಳೀಕೃತ ಆದಾಯ ತೆರಿಗೆ ವ್ಯವಸ್ಥೆ ತೆರಿಗೆದಾರರಿಗೆ ಹೆಚ್ಚಿನ ಸ್ಪಷ್ಟತೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಭದ್ರತೆ – ಆರ್ಥಿಕತೆಯ ಜೊತೆಯ ಸಂಬಂಧ
ಬಜೆಟ್ ಕೇವಲ ಆರ್ಥಿಕ ದಾಖಲೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಯ ಮೂಲಾಧಾರವೂ ಆಗಿದೆ ಎಂದು ಚೌಟ ಹೇಳಿದರು. ರಕ್ಷಣಾ ವಲಯಕ್ಕೆ ಹೆಚ್ಚುವರಿ ಅನುದಾನ ಮತ್ತು ಸ್ವದೇಶಿ ಉತ್ಪಾದನೆಗೆ ಉತ್ತೇಜನವನ್ನು ಸ್ವಾಗತಿಸಿದ ಅವರು, ಸೇವಾವಧಿಯಲ್ಲಿ ಗಾಯಗೊಂಡ ಸೈನಿಕರಿಗೆ ವಿಕಲಚೇತನ ಪಿಂಚಣಿ ವಿಸ್ತರಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಟೀಕೆ
ಸಹಕಾರಿ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಒತ್ತಿಹೇಳಿದ ಅವರು, ಕರ್ನಾಟಕದಲ್ಲಿ ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಅಸಹಕಾರದಿಂದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಬಡ ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಕರಾವಳಿ ಸಮಸ್ಯೆ – ಶಾಶ್ವತ ಪರಿಹಾರ ಅಗತ್ಯ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಸೋಮೇಶ್ವರ ಪ್ರದೇಶಗಳಲ್ಲಿ ತೀವ್ರವಾಗಿರುವ ಕಡಲ್ಕೊರೆತ ಸಮಸ್ಯೆ ಗಂಭೀರವಾಗಿದ್ದು, ಮೀನುಗಾರರ ಮನೆಗಳು ಮತ್ತು ಸಾರ್ವಜನಿಕ ಆಸ್ತಿಗೆ ಹಾನಿಯಾಗುತ್ತಿದೆ. ಈ ಸಮಸ್ಯೆಗೆ ವೈಜ್ಞಾನಿಕ ಮತ್ತು ಸಮಗ್ರ ಕರಾವಳಿ ರಕ್ಷಣಾ ಯೋಜನೆ ರೂಪಿಸಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದರು.
ಕೊಂಕಣ ರೈಲ್ವೆ ವಿಲೀನಕ್ಕೆ ಆಗ್ರಹ
Konkan Railway Corporation ಅನ್ನು Indian Railways ಜೊತೆ ವಿಲೀನಗೊಳಿಸುವ ಅಗತ್ಯವಿದೆ ಎಂದು ಚೌಟ ಅಭಿಪ್ರಾಯಪಟ್ಟರು. ಜಾರ್ಜ್ ಫರ್ನಾಂಡಿಸ್ ಕಾಲದಲ್ಲಿ ಆರಂಭವಾದ ಈ ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಅಗತ್ಯ ಎಂದು ಹೇಳಿದರು.
ಮಂಗಳೂರು ಅಭಿವೃದ್ಧಿಗೆ ಒತ್ತು
ಮಂಗಳೂರು ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ ಅವರು, ನವ ಮಂಗಳೂರು ಬಂದರು ಸಂಪೂರ್ಣ ಸಾಮರ್ಥ್ಯ ಬಳಕೆಗಾಗಿ ರಸ್ತೆ ಸಂಪರ್ಕ ಸುಧಾರಣೆ ಅಗತ್ಯವಿದೆ ಎಂದರು. ಮಂಗಳೂರು-ಬೆಂಗಳೂರು ಎಕ್ಸ್ಪ್ರೆಸ್ವೇ, ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡುವುದು ಹಾಗೂ ಹಾಸನ-ಮಂಗಳೂರು ರೈಲು ಮಾರ್ಗದ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿದರು.
ಇದರ ಜೊತೆಗೆ ‘ಸಿಟಿ ಎಕನಾಮಿಕ್ ರೀಜನ್’ ಯೋಜನೆಗೆ ಮಂಗಳೂರು ಸೂಕ್ತ ನಗರವಾಗಿದ್ದು, ಅದನ್ನು ಆದ್ಯತೆಯ ಮೇಲೆ ಪರಿಗಣಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ

