ಮಂಗಳೂರು: ಖ್ಯಾತ ಮಲಯಾಳಂ ನಟ ಜಯಕೃಷ್ಣನ್ ಅವರನ್ನು ಮಂಗಳೂರಿನ ಉರ್ವಾ ಪೊಲೀಸ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ನಟನ ವಿರುದ್ಧ ಟೆರರಿಸ್ಟ್ ಎಂದು ಬೈದು, ಧಾರ್ಮಿಕವಾಗಿ ನಿಂದನೆ ಮಾಡಿದ ಆರೋಪ ಬಂದಿದೆ.
ಇತ್ತೀಚೆಗಷ್ಟೆ, ಸೆಪ್ಟೆಂಬರ್ 9ರಂದು, ಜಯಕೃಷ್ಣನ್, ಸಂತೋಷ್ ಅಬ್ರಾಹಂ ಮತ್ತು ವಿಮಲ್ ಎಂಬವರು ಆಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಚಾಲಕರಾಗಿ ಬಂದ ಶಫೀಕ್ ಅಹ್ಮದ್ ಅವರ ಮೇಲೆ ಮೂವರು ಜಾತಿ ಹಾಗೂ ಧರ್ಮವನ್ನು ಆಧರಿಸಿ ಅವಮಾನಕಾರಿ ಪದಗಳನ್ನು ಬಳಸಿದ್ದು, ಟೆರರಿಸ್ಟ್ ಎಂದು ಕರೆಯಲಾಗಿದೆ.
ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ನಡೆದ ನಿಂದನೆ ಹಾಗೂ ಹಲ್ಲೆಗೆ ಯತ್ನದ ಆರೋಪದ ಮೇರೆಗೆ ಕ್ಯಾಬ್ ಚಾಲಕನು ಉರ್ವಾ ಠಾಣೆಗೆ ದೂರು ನೀಡಿದ ಹಿನ್ನೆಲೆ, ಭಾರತೀಯ ದಂಡ ಸಂಹಿತೆಯ ಕಲಂ 352 ಮತ್ತು 352(2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಜಯಕೃಷ್ಣನ್ ಅವರನ್ನು ವಶಕ್ಕೆ ಪಡೆದಿದ್ದು, ಇತರ ಇಬ್ಬರ ಶೋಧವೂ ಮುಂದುವರಿದಿದೆ.



