ಕಾಪು: ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದ ಪಂಚಾಯತ್ ವ್ಯಾಪ್ತಿಯ ಸರ್ವೇ ನಂ. 82/3 ರಲ್ಲಿರುವ ಬೆಳ್ಳರ್ಪಾಡಿ ಮಾಣೈ ಹರಿಖಂಡಿಗೆ ರಸ್ತೆ ಪಕ್ಕ ಸುಂದರ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ಅವರ ಮನೆಗಳ ಸಮೀಪದ 0.79 ಎಕರೆ ಸರಕಾರಿ ಜಾಗವನ್ನು ಶಾಲಾ ಮಕ್ಕಳ ಹಾಗೂ ಗ್ರಾಮಸ್ಥರ ಕ್ರೀಡಾಂಗಣವಾಗಿ ಶಾಶ್ವತವಾಗಿ ಕಾಯ್ದಿರಿಸಲು ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸುಮಾರು 35 ವರ್ಷಗಳಿಂದ ಮಾತ್ರ ಫ್ರೆಂಡ್ಸ ಸಹಯೋಗದೊಂದಿಗೆ ಈ ಜಾಗವನ್ನು ಗ್ರಾಮಸ್ಥರು ಕ್ರೀಡಾಂಗಣವಾಗಿ ಉಪಯೋಗಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ಮಕ್ಕಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕ ಕ್ರೀಡಾ ಚಟುವಟಿಕೆಗಳಿಗೆ ಈ ಮೈದಾನ ಅತ್ಯಂತ ಅಗತ್ಯವಾಗಿದೆ. ಗ್ರಾಮದಲ್ಲಿ ಪ್ರತ್ಯೇಕ ಕ್ರೀಡಾಂಗಣದ ವ್ಯವಸ್ಥೆ ಇಲ್ಲದಿರುವುದರಿಂದ ಈ ಜಾಗವೇ ಎಲ್ಲರಿಗೂ ಏಕೈಕ ಮೈದಾನವಾಗಿದ್ದು, ಗ್ರಾಮಸ್ಥರ ಹಿತದೃಷ್ಟಿಯಿಂದ ಇದನ್ನು ಶಾಶ್ವತವಾಗಿ ಕ್ರೀಡಾಂಗಣವಾಗಿ ಉಳಿಸಬೇಕೆಂದು ಒತ್ತಾಯಿಸಲಾಗಿದೆ.
ಈ ಸಂಬಂಧ ಬೈರಂಪಳ್ಳಿ ಗ್ರಾಮ ಪಂಚಾಯತ್ 17.07.2014 ರಂದು ನಡೆದ ಸಭೆಯಲ್ಲಿ ನಿರ್ಣಯ ಸಂಖ್ಯೆ 3/14-15 ರಂತೆ ತೀರ್ಮಾನ ಕೈಗೊಂಡಿದ್ದು, ಬಳಿಕ A.C. ಕುಂದಪುರ ಇವರಿಗೆ 69/2015-16 ಆದೇಶಕ್ಕಾಗಿ ಮನವಿ ಸಲ್ಲಿಸಲಾಗಿದೆ. ಆದಾಗ್ಯೂ, ಇದುವರೆಗೆ ಅಂತಿಮ ಆದೇಶ ಹೊರಬಂದಿಲ್ಲ ಎಂದು ಸಂಘಟನೆ ತಿಳಿಸಿದೆ.
ಪ್ರಸ್ತುತ ಕೆಲ ಖಾಸಗಿ ವ್ಯಕ್ತಿಗಳು ಜಾಗವನ್ನು ಒತ್ತುವರಿ ಮಾಡುವ ಪ್ರಯತ್ನ ನಡೆಸುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ಸಂಬಂಧಿತ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಾಗವನ್ನು ಕ್ರೀಡಾಂಗಣಕ್ಕಾಗಿ ಮೀಸಲಿರಿಸಿ ಅಗತ್ಯ ಆದೇಶ ಹೊರಡಿಸುವಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವೇಳೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ ಅವರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು. ಕಾಪು ತಾಲೂಕು ಘಟಕದ ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ, ಕಾಪು ಮಹಿಳಾ ಘಟಕದ ಅಧ್ಯಕ್ಷರಾದ ಅನುಸೂಯಾ ಶೆಟ್ಟಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ (ಬಾಣಬೆಟ್ಟು), ಶಂಕರ್ ಉಡುಪಿ, ಭೈರಂಪಳ್ಳಿ ಘಟಕದ ಅಧ್ಯಕ್ಷರಾದ ಕೃಷ್ಣಾನಂದ ನಾಯಕ್, ಉಪಾಧ್ಯಕ್ಷರಾದ ಶೋದನ್ ಶೆಟ್ಟಿ ಜೆ.ಜೆ., ಕಾರ್ಯದರ್ಶಿ ಕೃಷ್ಣ , ಮಂಜುಳಾ, ಉದಯ ನಾಯ್ಕ್ ಹಿರಿಯಡ್ಕ ಹಾಗೂ ಮತ್ತಿತರ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮದ ಮಕ್ಕಳ ಭವಿಷ್ಯ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರಿ ಜಾಗವನ್ನು ರಕ್ಷಿಸಿ ಕ್ರೀಡಾಂಗಣವಾಗಿ ಉಳಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.


