ಮಂಗಳೂರು: ನಗರದ ಪಿ.ಎ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಆಯಿಷತ್ ಲುತ್ಫಾ ನಜಾ ಕೆ.ಎ. ಅವರು ಬಿ.ಎಸ್.ಸಿ. (ಆಹಾರ, ಪೋಷಣಾ ವಿಜ್ಞಾನ ಮತ್ತು ಡಯಟೆಟಿಕ್ಸ್) ಪದವಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಒಟ್ಟು 4550 ಅಂಕಗಳಲ್ಲಿ 4220 ಅಂಕಗಳನ್ನು ಪಡೆದಿರುವ ಅವರು ಶೇಕಡಾ 92.75 ಫಲಿತಾಂಶದೊಂದಿಗೆ 9.56 ಸಿಜಿಪಿಎ (CGPA) ದಾಖಲಿಸಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮೆರೆದಿದ್ದಾರೆ. ತಮ್ಮ ನಿರಂತರ ಪರಿಶ್ರಮ ಮತ್ತು ಗುರಿಯುತ ಅಧ್ಯಯನದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ.
ಈ ಗಣನೀಯ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿ, ಮುಂದಿನ ವಿದ್ಯಾಭ್ಯಾಸದಲ್ಲಿಯೂ ಹೆಚ್ಚಿನ ಯಶಸ್ಸು ದೊರಕಲಿ ಎಂದು ಹಾರೈಸಿದ್ದಾರೆ.
ಕುಮಾರಿ ಲುತ್ಫಾ ಅವರು ಕಾಸರಗೋಡು ಜಿಲ್ಲೆಯ ತೆಕ್ಕಿಲ್ ನಿವಾಸಿಗಳಾದ ಶ್ರೀ ಅಬ್ದುಲ್ಲ ಕೆ ಹಾಗೂ ಶ್ರೀಮತಿ ಆಯಿಶತ್ ಫರೀದಾ ಅವರ ಪುತ್ರಿ. ಪ್ರಸ್ತುತ ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳಗಂಗೋತ್ರಿ ಕ್ಯಾಂಪಸ್ನಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮುಂದುವರಿಸಿಕೊಂಡಿದ್ದಾರೆ.


