ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಸಾಧಕ ಮಹಿಳೆಯರಿಗೆ “ಆತ್ಮಸಮ್ಮಾನ” ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಚೇರಿ ಪಡೀಲ್ನಲ್ಲಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕ ಮಹಿಳೆಯರಾದ ಶಿಕ್ಷಕರು ಮತ್ತು ಸಮಾಜ ಸೇವಕರಾದ ಕೆ.ಎ. ರೋಹಿಣಿ ಹಾಗೂ ಪ್ರಾಧ್ಯಾಪಕರು ಮತ್ತು ಹಾಸ್ಯ ಸಾಹಿತಿಗಾರರಾದ ಭುವನೇಶ್ವರಿ ಹೆಗಡೆ ಅವರನ್ನು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ರವರು ಅತಿಥಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸುವ ಮೂಲಕ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕರು ಮತ್ತು ಸಮಾಜ ಸೇವಕರಾದ ಕೆ.ಎ. ರೋಹಿಣಿ ರವರು “ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಬಾರದು. ಹೆಣ್ಣು ಸಹನಾಮಯಿ. ಮನೆ, ಕುಟುಂಬ, ಕಚೇರಿ, ಮಕ್ಕಳು, ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಹೆಣ್ಣು ಮಕ್ಕಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಹೆಚ್ಚಿನ ಕಡೆಗಳಲ್ಲಿ ಕೆಲಸಕ್ಕೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೇವಲ ಬ್ಯಾಂಕಿಂಗ್ ಸೇವೆಗೆ ಸೀಮಿತವಾಗಿರದೇ ಇತರ ಸಮಾಜಮುಖಿ ಚಟುವಟಿಕೆಗಳನ್ನು ವರ್ಷಂಪ್ರತಿ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ” ಎಂದರು.
ಪ್ರಾಧ್ಯಾಪಕರು ಮತ್ತು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ರವರು ಮಾತನಾಡುತ್ತಾ “ಸುವ್ಯವಸ್ಥಿತವಾಗಿ ರೂಪುಗೊಂಡಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ. ಈ ಸಂಸ್ಥೆಯಲ್ಲಿ ಶೇ. 95ಕ್ಕೂ ಮಹಿಳಾ ಸಿಬ್ಬಂದಿಗಳಿಗೆ ಉದ್ಯೋಗವನ್ನು ನೀಡಿರುವುದನ್ನು ನೋಡಿದರೆ ಮಹಿಳೆಯರಿಗೆ ನೀಡುವ ಗೌರವ ಗೊತ್ತಾಗುತ್ತದೆ ಎಂದರು.
ತಮ್ಮ ಹಾಸ್ಯಭರಿತ ಮಾತಿನಿಂದ ಸಂಘದ ಸಿಬ್ಬಂದಿಗಳನ್ನು ನಗೆಕಡಲಲ್ಲಿ ತೆಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ವರ್ಷಂಪ್ರತಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಾಧಕ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಆಚರಿಸಿಕೊಂಡು ಬರುತ್ತಿದೆ. ಅದೇ ರೀತಿ ಈ ವರ್ಷವೂ ಕೂಡ ಸಾಧಕ ಮಹಿಳೆಯರಾದ ಶಿಕ್ಷಕರು ಮತ್ತು ಸಮಾಜ ಸೇವಕರಾದ ಕೆ.ಎ. ರೋಹಿಣಿ ಮತ್ತು ಪ್ರಾಧ್ಯಾಪಕರು ಮತ್ತು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಯವರನ್ನು ಗುರುತಿಸಿ ಸನ್ಮಾನಿಸಲು ಸಂಘವು ತುಂಬಾ ಹೆಮ್ಮೆ ಪಡುತ್ತಿದೆ. ಸಂಘವು ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಶೇ.95 ರಷ್ಟು ಮಹಿಳಾ ಸಿಬ್ಬಂದಿಗಳಿಗೆ ಉದ್ಯೋಗವನ್ನು ನೀಡಿದ್ದು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ 30 ಶಾಖೆಗಳ ಶಾಖಾಧಿಕಾರಿಗಳು ಕೂಡ ಮಹಿಳೆಯರೇ ಆಗಿದ್ದಾರೆ ಎಂದರು. ಉಳ್ಳಾಲ ಶಾಖೆ ಶಾಖಾಧಿಕಾರಿ ಸಚಿನ್ ರವರು ಸ್ವಾಗತಿಸಿದರು.ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ಜಿ. ಪರಮೇಶ್ವರ್ ಪೂಜಾರಿ, ದಿವಾಕರ ಬಿ,ಪಿ., ಗೋಪಾಲ್ ಎಂ., ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ನ ಗೌರವ ಅಧ್ಯಕ್ಷರಾದ ವಾಮನ್ ಕೆ. ಅಧ್ಯಕ್ಷರಾದ ಗೋಪಾಲ ಪೂಜಾರಿ ವೀರನಗರ, ಕೋಶಾಧಿಕಾರಿಯಾದ ಬಾಬು ಎಸ್ ಕರ್ಕೇರ, ಮತ್ತಿತ್ತರರು ಉಪಸ್ಥಿತರಿದ್ದರು.
