ಮಂಗಳೂರು: ಅಮ್ಮುಂಜೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಂದ ಬಂದ ಮನವಿಯನ್ನು ಪರಿಗಣಿಸಿ, ಸೆೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ, ಅಮ್ಮುಂಜೆ ಉಳಿಸುವ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ನಿಯೋಗ ಶಿಕ್ಷಣ ಇಲಾಖೆಗೆ ಮನವಿ ನೀಡಿ ವಿನಂತಿಸಿದೆ.

ದಶಕಗಳಿಂದಲೂ ಗ್ರಾಮೀಣ ಮಕ್ಕಳಿಗೆ ಸುಲಭವಾಗಿ ಲಭ್ಯವಿರುವ ಗುಣಮಟ್ಟದ ಶಿಕ್ಷಣದ ಕೇಂದ್ರವಾಗಿರುವ ಈ ಶಾಲೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಸಹ ಬೆಳಕಾಗಿದ್ದು, ಸಮುದಾಯದ ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ಇತ್ತೀಚಿನ ಕೆಲವು ಆಡಳಿತಾತ್ಮಕ ಹಾಗೂ ಸೌಕರ್ಯ ಸಂಬಂಧಿತ ಸಮಸ್ಯೆಗಳು ಶಾಲೆಯ ಭವಿಷ್ಯ ಪ್ರಶ್ನಾರ್ಥಕವಾಗುವ ಸ್ಥಿತಿಗೆ ತಳ್ಳಿರುವುದು ಗಂಭೀರ ವಿಷಯವಾಗಿದೆ ಎಂದು ವೇದಿಕೆ ತಿಳಿಸಿದೆ.
ಶಾಲೆಯ ಸ್ಥಗಿತ, ವಿಲೀನ ಅಥವಾ ಮುಚ್ಚುವಿಕೆಯ ಸಾಧ್ಯತೆಗಳು ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆ ತರುವುದಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಅಭಾವವನ್ನು ಉಂಟುಮಾಡುವ ಅಪಾಯವಿದೆ. ಮಕ್ಕಳು ದೂರದ ಶಾಲೆಗಳತ್ತ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿ, ಶಿಕ್ಷಣ ಬಿಟ್ಟುಬಿಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳೂ ಇದ್ದಾವೆ ಎಂಬ ಆತಂಕವನ್ನು ವೇದಿಕೆ ವ್ಯಕ್ತಪಡಿಸಿದೆ.
ತುಳುನಾಡ ರಕ್ಷಣಾ ವೇದಿಕೆ ಶಿಕ್ಷಣ ಇಲಾಖೆಗೆ ಮೂರು ಮುಖ್ಯ ಬೇಡಿಕೆಗಳನ್ನು ಮುಂದಿರಿಸಿದೆ:
1. ಅಮ್ಮುಂಜೆ ಸೆೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆಯ ನಿರಂತರ ಕಾರ್ಯನಿರ್ವಹಣೆಗೆ ತಕ್ಷಣದ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವುದು.
2. ಸಂಬಂಧಿತ ಅಧಿಕಾರಿಗಳು, ನಿರ್ವಾಹಕರು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಸಂವಾದ ನಡೆಸಿ ಶಾಲೆಯ ಸ್ಥಗಿತ/ಮುಚ್ಚುವಿಕೆ ಕುರಿತು ಯಾವ ರೀತಿಯ ಕ್ರಮಗಳನ್ನೂ ಕೈಗೊಳ್ಳದಂತೆ ನಿರ್ದೇಶಿಸುವುದು.
3. ಶಾಲೆಯ ಮೂಲಸೌಕರ್ಯ, ಶಿಕ್ಷಕರ ಸಂಖ್ಯೆ ಹಾಗೂ ಕಲಿಕಾ ವಾತಾವರಣವನ್ನು ಬಲಪಡಿಸುವ ನಿಟ್ಟಿನಲ್ಲಿ ತುರ್ತು ಪರಿಹಾರ ಕ್ರಮಗಳನ್ನು ಜಾರಿಗೆ ತರುವುದು.
“ಶಿಕ್ಷಣ ಸಂಸ್ಥೆಯನ್ನು ಉಳಿಸುವುದು ಕೇವಲ ಕಟ್ಟಡ ಉಳಿಸುವುದಲ್ಲ, ಇದು ನೂರಾರು ಮಕ್ಕಳ ಭವಿಷ್ಯವನ್ನು ಉಳಿಸುವ ಒಂದು ಜವಾಬ್ದಾರಿ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾನವೀಯತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಹಕ್ಕಿನ ದೃಷ್ಟಿಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು,” ಎಂದು ತುಳುನಾಡ ರಕ್ಷಣಾ ವೇದಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವೇದಿಕೆ ಸಾರ್ವಜನಿಕರ ಧ್ವನಿಗೆ ಬೆಂಬಲ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆಯಿಂದ ತಕ್ಷಣ ಸ್ಪಂದನೆ ದೊರೆಯುವ ನಿರೀಕ್ಷೆಯನ್ನು ಪ್ರಕಟಿಸಿದೆ. ಮನವಿ ನೀಡಲು ತೆರಲಿದ್ದ ನೀಯೋಗದಲ್ಲಿ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು , ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷ ಸುನಂದ ಕೋಟ್ಯಾನ್, ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಮತಾ ಅಮೀನ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ದೀಪ್ ಚಾಂತರ್ ಪ್ರಧಾನ ಕಾರ್ಯದರ್ಶಿ ಶರತ್ ಆರೂರು, ಪ್ರಶಾಂತ್ ಕಲ್ಯಾಣ ಪುರ, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣನಂದ ನಾಯಕ್, ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಕೃಷ್ಣ ಎಂ, ಮಮತಾ ಎಂ, ಸುಲೋಚನ ಪೂಜಾರಿ, ಧನವಂತಿ ಎರ್ಮಾಳ್ , ಮಮತಾ ಅಮೀನ್ ಯಶೋದ ಉಡುಪಿ ವಿನೋದ ಕುಲಾಲ್ ಸವಿತಾ ಶೆಟ್ಟಿ, ಜ್ಯೋತಿ ಆರ್, ಲಕ್ಷ್ಮಿ ಆರ್ ಮತ್ತಿತರು ಉಪಸ್ಥಿತರಿದ್ದರು.


