ಶಿವಪುರ–ಕೆರೆಬಿಟ್ಟು ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ – ಬಡ ರೈತರ ಬದುಕು, ನಾಗಾರಾಧನೆ ಹಾಗೂ ದೈವಾರಾಧನೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲು ಆಗ್ರಹ
ಮಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲ್ಲೂಕಿನ ಶಿವಪುರ ಹಾಗೂ ಕೆರೆಬಿಟ್ಟು ಗ್ರಾಮದ ನೂರಾರು ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಬಾಲಜಿ ಯೋಗಿಶ್ ವಿ. ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಮನವಿ ಸಲ್ಲಿಸಿ ಈ ಭಾಗದ ಬಡ ಕೃಷಿಕರು ಹಾಗೂ ರೈತರ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಹೆಬ್ರಿ ತಾಲ್ಲೂಕಿನ ಶಿವಪುರ ಮತ್ತು ಕೆರೆಬಿಟ್ಟು ಗ್ರಾಮದ ನಿವಾಸಿಗಳು ಅನಾದಿಕಾಲದಿಂದಲೂ ತಮ್ಮ ಜಮೀನುಗಳಲ್ಲಿ ವಾಸ್ತವ್ಯ ಮಾಡಿಕೊಂಡು ಕೃಷಿ ಹಾಗೂ ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಈ ಪ್ರದೇಶದ ಜನರು ತಮ್ಮ ಪೂರ್ವಜರಿಂದ ಬಂದ ಭೂಮಿ, ಕೃಷಿ ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಂಡು ಬದುಕುತ್ತಿದ್ದಾರೆ. ನಾಗಾರಾಧನೆ ಮತ್ತು ದೈವಾರಾಧನೆ ಸೇರಿದಂತೆ ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ನೂರಾರು ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಸ್ಥಳೀಯ ಕೃಷಿಕರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ. ಭೂಸ್ವಾಧೀನದಿಂದ ಅನೇಕ ಕುಟುಂಬಗಳು ತಮ್ಮ ಮನೆ, ಕೃಷಿ ಭೂಮಿ ಹಾಗೂ ಜೀವನೋಪಾಯವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಲ್ಲದೆ, ತಲೆತಲಾಂತರಗಳಿಂದ ಆರಾಧಿಸಿಕೊಂಡು ಬಂದಿರುವ ನಾಗಬನ, ನಾಗದೇವರುಗಳು ಹಾಗೂ ದೈವ-ದೇವರುಗಳ ಆರಾಧನಾ ಸ್ಥಳಗಳಿಗೂ ಧಕ್ಕೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಹೆಬ್ರಿ ತಾಲ್ಲೂಕಿನ ಕಸಬು ಪ್ರದೇಶದಲ್ಲಿ ರಂಗನ ಪರದೈವದ ವಿಚಾರದಿಂದ ಕೃಷಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ KIADB ವತಿಯಿಂದ ಮತ್ತಷ್ಟು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿರುವುದು ಈ ಭಾಗದ ಜನರಿಗೆ ಹೆಚ್ಚುವರಿ ಸಂಕಷ್ಟ ತಂದೊಡ್ಡಲಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಬಡ ರೈತರು ಹಾಗೂ ಕೃಷಿಕರ ಬದುಕಿಗೆ ತೊಂದರೆಯಾಗಬಾರದು. ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳ ಹಿತಾಸಕ್ತಿ, ಧಾರ್ಮಿಕ ನಂಬಿಕೆಗಳು ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ.
ಆದ್ದರಿಂದ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿಯವರು ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ, ಶಿವಪುರ ಮತ್ತು ಕೆರೆಬಿಟ್ಟು ಗ್ರಾಮದ ಕೃಷಿಕರ ಹಿತದೃಷ್ಟಿಯಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಬಡ ರೈತರಿಗೆ ನ್ಯಾಯ ಒದಗಿಸಿ ಅವರ ಬದುಕು ಮತ್ತು ಪರಂಪರೆಯನ್ನು ಉಳಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

