ಮಂಗಳೂರು: ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿಯವರ ಆಶ್ರಯದಲ್ಲಿ, ಶ್ರೀ ಶಿವದುರ್ಗಾಂಭ ಮಠ ಶಿವಗಿರಿ, ಮರಿಯಣ್ಣಪಾಲು, ಕೊಂಡಾಣ, ಮಾಡೂರು ಹಾಗೂ ನಾಟೆಕಲ್ನ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ನವೆಂಬರ್ 29ರಂದು ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾಡೂರಿನ ಮರಿಯಣ್ಣಪಾಲು, ಕೊಂಡಾಣದಲ್ಲಿರುವ ಶ್ರೀ ಶಿವದುರ್ಗಾಂಭ ಮಠ ಶಿವಗಿರಿ ಆವರಣದಲ್ಲಿ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಸೊಂಟನೋವು, ಪಾರ್ಶ್ವವಾಯು (ಸ್ಟ್ರೋಕ್), ಮಂಡಿನೋವು, ಮೂಲವ್ಯಾಧಿ, ವಾತರೋಗ, ಅಸಿಡಿಟಿ, ಫಿಸ್ಟುಲಾ, ಅಲರ್ಜಿ, ಮಲಬದ್ಧತೆ, ಉಬ್ಬಿರುವ ರಕ್ತನಾಳಗಳ ಸಮಸ್ಯೆ (ವೆರಿಕೋಸ್ ವೇನ್ಸ್), ಅಜೀರ್ಣ, ನಿದ್ರಾಹೀನತೆ, ಅಸ್ತಮಾ, ಸೋರಿಯಾಸಿಸ್, ರಕ್ತಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಜ್ಞ ಆಯುರ್ವೇದ ವೈದ್ಯರಿಂದ ವೈದ್ಯಕೀಯ ತಪಾಸಣೆ, ಸಲಹೆ ಹಾಗೂ ಸೂಕ್ತ ಚಿಕಿತ್ಸಾ ಮಾರ್ಗದರ್ಶನ ನೀಡಲಾಗುವುದು.
ಆರೋಗ್ಯವೇ ಮಾನವನ ಅಮೂಲ್ಯ ಸಂಪತ್ತು ಎಂಬ ಆಶಯದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಶ್ರೀ ಶಿವದುರ್ಗಾಂಭ ಮಠ ಶಿವಗಿರಿಯ ಆಡಳಿತ ಮೊಕ್ತೇಸರರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

