ಮಂಗಳೂರು: ಉದ್ಯೋಗ ನಿಮಿತ್ತ ಇಸ್ರೇಲ್ಗೆ ತೆರಳಿದ್ದ ಮಂಗಳೂರಿನ 41 ವರ್ಷದ ಶಾಡ್ರಕ್ ಎಮ್ಯಾನುಯೆಲ್ ಅವರು ನಾಪತ್ತೆಯಾಗಿರುವ ಘಟನೆ ಅವರ ಕುಟುಂಬದವರಲ್ಲಿ ತೀವ್ರ ಆತಂಕ ಮತ್ತು ಕಳವಳಕ್ಕೆ ಕಾರಣವಾಗಿದೆ. ಕಳೆದ ಅಕ್ಟೋಬರ್ 16ರಂದು ಕುಟುಂಬದವರೊಂದಿಗೆ ಕೊನೆಯದಾಗಿ ದೂರವಾಣಿ ಸಂಪರ್ಕದಲ್ಲಿದ್ದ ಅವರು, ಆ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ (ರಿ.) ಭಾರತೀಯ ರಾಯಭಾರ ಕಚೇರಿಯನ್ನು ಒತ್ತಾಯಿಸಿದೆ.
ಮಂಗಳೂರಿನ ಬಲ್ಮಠದಲ್ಲಿರುವ CSI ಶಾಂತಿ ಕ್ಯಾಥೆಡ್ರಲ್ನ ಸದಸ್ಯರಾಗಿರುವ ಶಾಡ್ರಕ್ ಎಮ್ಯಾನುಯೆಲ್ ಅವರು, ಮಂಗಳೂರಿನ ಫರ್ನಾಂಡಿಸ್ ಗ್ರೂಪ್ ಮೂಲಕ ಉದ್ಯೋಗಕ್ಕೆ ನೇಮಕಗೊಂಡು ಇಸ್ರೇಲ್ನ ನಜರೆತ್ ಸಮೀಪದ ನೋಫ್ ಹಾ-ಗಲೀಲ್ನಲ್ಲಿರುವ UCT Liquid Solution ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 16ರಂದು ಕುಟುಂಬದವರೊಂದಿಗೆ ಕೊನೆಯದಾಗಿ ಮಾತನಾಡಿದ ಬಳಿಕ ಅವರ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರು ಕೆಲಸ ಮಾಡುತ್ತಿದ್ದ ಸ್ಥಳದಿಂದ ನಾಪತ್ತೆಯಾಗಿರುವುದಾಗಿ ಕುಟುಂಬದವರಿಗೆ ತಿಳಿದುಬಂದಿದೆ.
ಕುಟುಂಬದವರು ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಪತ್ನಿ, ಮಕ್ಕಳು, ವಯೋವೃದ್ಧ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ಅವರ ಸುರಕ್ಷತೆಯ ಬಗ್ಗೆ ತೀವ್ರ ಆತಂಕದಲ್ಲಿದ್ದು, ಮಾನಸಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಮನೆಯ ಆಧಾರವಾಗಿರುವ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ದೊರೆಯದಿರುವುದು ಕುಟುಂಬವನ್ನು ದಿಕ್ಕುತೋಚದ ಸ್ಥಿತಿಗೆ ತಳ್ಳಿದೆ.
ಈ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರು ಇಸ್ರೇಲ್ನ ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ರಾಯಭಾರಿಗಳು ಹಾಗೂ ಕಾನ್ಸುಲರ್ ಅಧಿಕಾರಿಗಳಿಗೆ ಅಧಿಕೃತ ಮನವಿ ಸಲ್ಲಿಸಿ, ಪ್ರಕರಣದಲ್ಲಿ ತುರ್ತು ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.
ಇಸ್ರೇಲ್ನ ಸಂಬಂಧಪಟ್ಟ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ನಾಪತ್ತೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಶಾಡ್ರಕ್ ಅವರು ಉದ್ಯೋಗ ನಿರ್ವಹಿಸುತ್ತಿದ್ದ UCT Liquid Solution ಸಂಸ್ಥೆಯನ್ನು ಸಂಪರ್ಕಿಸಿ, ಅವರ ಕೊನೆಯ ಹಾಜರಾತಿ ಮತ್ತು ಕೊನೆಯದಾಗಿ ಕಂಡುಬಂದ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಬೇಕು. ಮಂಗಳೂರಿನ ಫರ್ನಾಂಡಿಸ್ ಗ್ರೂಪ್ನಿಂದಲೂ ಉದ್ಯೋಗ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೆ, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಪ್ರಕರಣವನ್ನು ವೈಯಕ್ತಿಕವಾಗಿ ಗಮನಿಸಿ, ಶಾಡ್ರಕ್ ಅವರ ಪ್ರಸ್ತುತ ಇರುವಿಕೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ರಾಜತಾಂತ್ರಿಕ ಹಾಗೂ ಕಾನ್ಸುಲರ್ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣದ ಬೆಳವಣಿಗೆಗಳನ್ನು ಕುಟುಂಬದವರಿಗೆ ನಿರಂತರವಾಗಿ ತಿಳಿಸುವುದರೊಂದಿಗೆ, ಅಗತ್ಯ ಕಾನೂನು ಮತ್ತು ಕಾನ್ಸುಲರ್ ನೆರವು ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ವಿದೇಶದಲ್ಲಿ ಉದ್ಯೋಗಕ್ಕಾಗಿ ತೆರಳುವ ಭಾರತೀಯರ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಒಬ್ಬ ವ್ಯಕ್ತಿ ನಾಪತ್ತೆಯಾದಾಗ ಆತನ ಕುಟುಂಬ ಅನುಭವಿಸುವ ನೋವು ಮತ್ತು ಆತಂಕವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಇದು ಕೇವಲ ಒಬ್ಬ ವ್ಯಕ್ತಿಯ ಪತ್ತೆಯ ಪ್ರಶ್ನೆಯಲ್ಲ; ಪತ್ನಿ, ಮಕ್ಕಳು ಹಾಗೂ ವಯೋವೃದ್ಧ ತಾಯಿಯ ಬದುಕಿನಲ್ಲಿ ಮತ್ತೆ ನೆಮ್ಮದಿ ಮೂಡಿಸುವ ಮಾನವೀಯ ಹೊಣೆಗಾರಿಕೆಯಾಗಿದೆ ಎಂದು ಯೋಗಿಶ್ ಶೆಟ್ಟಿ ಜಪ್ಪು ತಿಳಿಸಿದ್ದಾರೆ.
ಈ ಮನವಿಯ ಪ್ರತಿಗಳನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿ, ಶಾಡ್ರಕ್ ಎಮ್ಯಾನುಯೆಲ್ ಅವರ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.
ಶಾಡ್ರಕ್ ಎಮ್ಯಾನುಯೆಲ್ ಅವರು ಸುರಕ್ಷಿತವಾಗಿ ಪತ್ತೆಯಾಗಲಿ ಹಾಗೂ ಅವರ ಕುಟುಂಬಕ್ಕೆ ಶೀಘ್ರದಲ್ಲೇ ಸಿಹಿಸುದ್ದಿ ದೊರೆಯಲಿ ಎಂಬ ಆಶಯದೊಂದಿಗೆ ತುಳುನಾಡ ರಕ್ಷಣಾ ವೇದಿಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ತುರ್ತು ಸ್ಪಂದನೆಯನ್ನು ನಿರೀಕ್ಷಿಸುತ್ತಿದೆ.

