ಉಡುಪಿ, ಅ. 11: ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಕಲಾವಿದರು ಮತ್ತು ಕಲಾಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಹೇಳಿದರು.
ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಅ. 11ರಂದು ಉಡುಪಿಯ ವೇದಿಕೆಯ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ವೇದಿಕೆಯ ದುಬೈ ಘಟಕದ ಅಧ್ಯಕ್ಷರು, ತುಳು ನಾಟಕ ಹಾಗೂ ಚಲನಚಿತ್ರ ಕಲಾವಿದ ಮತ್ತು ಕಲಾಪೋಷಕರಾದ ಅಶೋಕ್ ಬೈಲೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದು. ಕಲಾವಿದರು ತಮ್ಮ ಪ್ರತಿಭೆಯ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟರೆ, ಕಲಾಪೋಷಕರು ಅಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಮೂಲಕ ಕಲಾರಂಗದ ಬೆಳವಣಿಗೆಗೆ ಸಹಕರಿಸುತ್ತಾರೆ. ಇಂತಹ ಸೇವೆಗಳನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಗೀಶ್ ಶೆಟ್ಟಿ ಜೆಪ್ಪು ರವರು ಮಾತನಾಡುತ್ತ ಅಶೋಕ್ ಬೈಲೂರು ಉಡುಪಿ ಜಿಲ್ಲೆಯವರಾಗಿದ್ದು ಬಳಿಕ ಉದ್ಯೋಗ ನಿಮಿತ್ತ ದುಬೈ ತೆರಳಿದ ಬಳಿಕ ತುಳು ಭಾಷೆ ಮತ್ತು ಸಂಸ್ಕೃತಿ ತುಳುವರ ಅಸ್ಮಿತೆಯ ಪ್ರತೀಕವಾಗಿದ್ದು, ರವರು ಅವುಗಳ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವಲ್ಲಿ ಕೆಲಸ ಮಾಡುತ್ತಿದ್ದು ನಾಟಕ, ಚಲನಚಿತ್ರ ಸೇರಿದಂತೆ ವಿವಿಧ ಕಲಾಮಾಧ್ಯಮಗಳ ಮೂಲಕ ತುಳುನಾಡಿನ ಜೀವನಶೈಲಿ, ಸಂಪ್ರದಾಯ, ಆಚಾರ-ವಿಚಾರ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ತುಳುನಾಡಿನ ಸಾಂಸ್ಕೃತಿಕ ಸೇವೆಗೆ ಗೌರವ
ತುಳುನಾಡ ರಕ್ಷಣಾ ವೇದಿಕೆಯ ದುಬೈ ಘಟಕದ ಅಧ್ಯಕ್ಷರಾಗಿರುವ ಅಶೋಕ್ ಬೈಲೂರು ಅವರು ತುಳು ನಾಟಕ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಕಲಾಪೋಷಕರಾಗಿಯೂ ಗುರುತಿಸಿಕೊಂಡಿರುವ ಅವರು, ವಿದೇಶದಲ್ಲಿ ನೆಲೆಸಿದ್ದರೂ ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿ ಮತ್ತು ಸಂಘಟನಾತ್ಮಕ ಚಟುವಟಿಕೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.
ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಅವರ ಕಲಾಸೇವೆ ಮತ್ತು ತುಳು ಭಾಷೆಯೊಂದಿಗಿನ ಒಡನಾಟವನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಗೌರವವು ತುಳು ಕಲಾವಿದರು ಹಾಗೂ ಕಲಾಪೋಷಕರಿಗೆ ಮತ್ತಷ್ಟು ಪ್ರೇರಣೆ ನೀಡುವುದರ ಜೊತೆಗೆ, ತುಳುನಾಡಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮೀನಗರ, ಜಿಲ್ಲಾ ಉಪಾಧ್ಯಕ್ಷ ಮನೋಜ್, ಕಾಪು ಘಟಕದ ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ ಹಾಗೂ ಕಾಪು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ ಉಪಸ್ಥಿತರಿದ್ದರು.
ಇದಲ್ಲದೆ, ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಗಾಯತ್ರಿ, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪವಿತ್ರ, ಸಂಘಟನಾ ಕಾರ್ಯದರ್ಶಿ ಶಂಕರ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರೋಷನ್ ಡಿಸೋಜ, ರಾಜೇಶ್ವರಿ, ಹರಿಣಾಕ್ಷಿ, ವಿನೋದಾ, ಗುಲಾಬಿ, ಪುಷ್ಪ, ಜ್ಯೋತಿ, ಬೈರಂಪಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ನಿಶಿತ್ ಪೂಜಾರಿ ಮುಟ್ಟಿಕಲ್ಲು, ರಂಜಿತ್ ಕುಲಾಲ್ ಶಿರೂರು, ಸಚಿನ್ ಕುಮಾರ್ ಶೆಟ್ಟಿ, ಅಜಯ್ ಕುಲಾಲ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಸಾರಿದ ಕಾರ್ಯಕ್ರಮವು ಕಲಾವಿದರಿಗೆ ಗೌರವ ಸಲ್ಲಿಸುವುದರೊಂದಿಗೆ ಸಂಘಟನೆಯ ಸಾಂಸ್ಕೃತಿಕ ಬದ್ಧತೆಯನ್ನು ಪ್ರತಿಬಿಂಬಿಸಿತು.

