ಬೆಂಗಳೂರು, ಸೆ.16: ಕರ್ನಾಟಕ ಮಾತ್ರವಲ್ಲದೆ ಕೇರಳ, ಮುಂಬೈ, ಪುಣೆ, ನಾಸಿಕ್ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಲ್ಲಿ ನೆಲೆಸಿರುವ ತುಳುವರು ಒಗ್ಗಟ್ಟಾಗಿ, ಸಂಘಟಿತರಾಗಿ ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಬೇಕೆಂಬ ಆಶಯದೊಂದಿಗೆ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಸರ್ಕಾರದ ನಿರ್ಣಯಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಹಾಗೂ ತುಳುವೆರೆ ಚಾವಡಿಯ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ ತಿಳಿಸಿದ್ದಾರೆ.
ಕರ್ನಾಟಕದ ಕರಾವಳಿ ಪ್ರದೇಶ, ಮಲೆನಾಡು, ಮಡಿಕೇರಿ ಹಾಗೂ ಕಾಸರಗೋಡು ಭಾಗಗಳಲ್ಲಿ ತುಳು ಭಾಷಿಗರ ಸಂಖ್ಯೆ ಗಣನೀಯವಾಗಿದೆ. ತುಳು ಭಾಷೆಗೆ ಕರ್ನಾಟಕದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆ ಅಥವಾ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ವಿವಿಧ ಸಂಘಟನೆಗಳು, ತುಳುಪರ ಹೋರಾಟಗಾರರು ಹಾಗೂ ವಿಶ್ವದಾದ್ಯಂತ ನೆಲೆಸಿರುವ ತುಳುವರಿಂದ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುಮೋದನೆಯ ಸುದಿನ ಯಾವಾಗ ಬರಲಿದೆ ಎಂಬ ನಿರೀಕ್ಷೆಯಲ್ಲಿ ತುಳುವರು ಇದ್ದಾರೆ.
ದೇಶ-ವಿದೇಶಗಳಲ್ಲಿ ನೆಲೆಸಿರುವ ತುಳು ಭಾಷಿಗರನ್ನು ಒಂದೆಡೆ ಸೇರಿಸಿ, ಸಂಪದ್ಭರಿತ ತುಳು ಭಾಷೆ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಜಾನಪದ ಬದುಕಿನ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳು, ಕಮ್ಮಟಗಳು ಹಾಗೂ ಜಾಗೃತಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇದರ ಮೂಲಕ ಮುಂದಿನ ಪೀಳಿಗೆಗೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ, ತುಳು ಭಾಷೆಗೆ ಸೂಕ್ತವಾದ ಅಧಿಕೃತ ಮಾನ್ಯತೆ ನೀಡುವಂತೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ.
ಕರಾವಳಿ ಭಾಗದ ಶಾಸಕರು ವಿಧಾನಸಭೆಯಲ್ಲಿ ತುಳು ಭಾಷೆಯ ಪರವಾಗಿ ಆಗಿಂದಾಗ್ಗೆ ಧ್ವನಿ ಎತ್ತಿ, ವಿವಿಧ ತುಳುಪರ ಸಂಘಟನೆಗಳ ಮನವಿಗಳನ್ನು ಸರ್ಕಾರದ ಗಮನಕ್ಕೆ ತರುತ್ತಿರುವುದು ಗಮನಾರ್ಹವಾಗಿದೆ. ವಿಶೇಷವಾಗಿ ಪುತ್ತೂರು ಶಾಸಕ ಅಶೋಕ್ ರೈ ಅವರು ವಿಧಾನಸಭೆಯಲ್ಲಿ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರೊಂದಿಗೆ ತುಳು ಭಾಷೆಯಲ್ಲಿ ಸಂವಹನ ನಡೆಸುವ ಮೂಲಕ ಸದನದ ಗಮನ ಸೆಳೆದಿರುವುದು ತುಳು ಭಾಷೆಯ ಬಳಕೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.
ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಿ, ಕಳೆದ ಎರಡು ವರ್ಷಗಳಿಂದ ಈ ವಿಚಾರಕ್ಕೆ ಸಂಬಂಧಿಸಿದ ಕಚೇರಿ ಕೆಲಸಗಳಲ್ಲಿ ಶ್ರಮಿಸುತ್ತಿರುವ ಜಿ.ವಿ.ಎಸ್. ಉಲ್ಲಾಳ್ ಅವರ ಪ್ರಯತ್ನವನ್ನೂ ಸ್ಮರಿಸಬೇಕಾಗಿದೆ. ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು, ಅನೇಕ ಸಂದರ್ಭಗಳಲ್ಲಿ ಸ್ವಂತ ಖರ್ಚಿನಲ್ಲಿ ಬೆಂಗಳೂರು–ಮಂಗಳೂರು ನಡುವೆ ಸಂಚರಿಸಿ, ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ಅಗತ್ಯ ದಾಖಲೆಗಳು ಹಾಗೂ ಮನವಿಗಳನ್ನು ಸಲ್ಲಿಸಿ ಸಹಕಾರ ನೀಡಿರುವುದು ಈ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಿದೆ.
ಕರಾವಳಿಯ ತುಳುನಾಡು ಭಾಗದ ಶಾಸಕರ ಪ್ರಯತ್ನ, ತುಳುನಾಡ ರಕ್ಷಣಾ ವೇದಿಕೆಯ ನಿರಂತರ ಹೋರಾಟ, ಅಖಿಲ ಭಾರತ ತುಳು ಒಕ್ಕೂಟದ ಕಾರ್ಯಚಟುವಟಿಕೆಗಳು, ದೇಶದ ವಿವಿಧ ನಗರಗಳಲ್ಲಿ ನೆಲೆಸಿರುವ ತುಳು ಸಂಘಟನೆಗಳ ಪ್ರಯತ್ನಗಳು ಹಾಗೂ ಬೆಂಗಳೂರಿನ ತುಳು ಸಂಘಟನೆಗಳ ಒತ್ತಾಯ—ಇವೆಲ್ಲವೂ ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ನಡೆಯುತ್ತಿರುವ ಒಗ್ಗಟ್ಟಿನ ಹೋರಾಟದ ಭಾಗವಾಗಿವೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆ, ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಬಲವಾದ ಆಡಳಿತಾತ್ಮಕ ನೆಲೆ ಸಿಗಬೇಕು ಎಂಬುದು ವಿಶ್ವದಾದ್ಯಂತ ನೆಲೆಸಿರುವ ತುಳುವರ ಪ್ರಮುಖ ಆಶಯವಾಗಿದೆ. ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತರೆ ಭಾಷೆಯ ಬಳಕೆ, ಶಿಕ್ಷಣ, ಆಡಳಿತ, ಸಂಶೋಧನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಅವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18ರಿಂದ ಮಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯತ್ತ ಸಮಸ್ತ ಕರಾವಳಿ, ಮಲೆನಾಡು, ಮಡಿಕೇರಿ ಹಾಗೂ ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ತುಳುವರು ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ. ಹಲವು ವರ್ಷಗಳ ನಿರಂತರ ಹೋರಾಟಕ್ಕೆ ಸಕಾರಾತ್ಮಕ ಫಲಿತಾಂಶ ದೊರಕುವಂತೆ ಈ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯ ಕುರಿತು ಮಹತ್ವದ ನಿರ್ಧಾರ ಹೊರಬರಲಿ ಎಂಬುದು ಸಮಸ್ತ ತುಳುವರ ಅಭಿಲಾಷೆಯಾಗಿದೆ.
ತುಳು ಭಾಷೆ ತುಳುನಾಡಿನ ಮಣ್ಣಿನ ಕೊಡುಗೆ ಮಾತ್ರವಲ್ಲ; ಅದು ಕರ್ನಾಟಕದ ಹಾಗೂ ಭಾರತದ ಸಾಂಸ್ಕೃತಿಕ ಸಂಪತ್ತಿನ ಒಂದು ಅವಿಭಾಜ್ಯ ಭಾಗವಾಗಿದೆ. ಈ ಅಮೂಲ್ಯ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯವೂ ಹಕ್ಕು ಕೂಡ ಆಗಿದೆ.
— ಪುರುಷೋತ್ತಮ್ ಚೇಂಡ್ಲಾ
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ – ಮಾಜಿ ಸದಸ್ಯರು
ಗೌರವಾಧ್ಯಕ್ಷರು, ತುಳುವೆರೆ ಚಾವಡಿ
ಬೆಂಗಳೂರು

