ಉಡುಪಿ, ಸೆ.14: ನಾಗರಿಕ ವೇದಿಕೆ ನರ್ನಾಡು–ಮದಗ ಲೇಔಟ್, ಉಪ್ಪೂರು ಇದರ ವತಿಯಿಂದ ಆಯೋಜಿಸಲಾದ 4ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.14ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಗಣೇಶೋತ್ಸವದ ಅಂಗವಾಗಿ ಗಣೇಶ ವಿಗ್ರಹವನ್ನು ವಿಶಿಷ್ಟವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತಂದು ಗಣೇಶ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಾಗರಿಕ ವೇದಿಕೆಯ ಗೌರವಾಧ್ಯಕ್ಷರಾದ ಹರೀಶ್ ಅಮೀನ್ ಹಾಗೂ ಅವರ ಧರ್ಮಪತ್ನಿ ಶ್ರೀ ದೇವರ ಗಣಯಾಗ ಸೇವೆಯನ್ನು ನೆರವೇರಿಸಿದರು.
ಬೆಳಿಗ್ಗೆ ಗಣೇಶೋತ್ಸವದ ವೇದಿಕೆಯಲ್ಲಿ ಸ್ಥಳೀಯರ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಲೇಔಟ್ನ ವಿವಿಧ ಪ್ರತಿನಿಧಿಗಳ ಸಹಕಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಂಜೆ 4.30ಕ್ಕೆ ನಡೆದ ಧಾರ್ಮಿಕ ಸಭೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸಾದ್ ನೇತ್ರಾಲಯ, ಉಡುಪಿ ಇದರ ಡಾ. ಕೃಷ್ಣಪ್ರಸಾದ್, ನಾಗರಿಕ ವೇದಿಕೆ ನಡೆಸುತ್ತಿರುವ ಸಮಾಜಮುಖಿ ಹಾಗೂ ಜನಪರ ಕಾರ್ಯಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಕಕ್ಕುಂಜೆ ವಾರ್ಡ್ನ ಮಾಜಿ ನಗರಸಭಾ ಸದಸ್ಯ ಹಾಗೂ ಸಮಾಜ ಸೇವಕ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಸೇವೆ ಸಲ್ಲಿಸುತ್ತಿರುವ ವನಜಾ ಪೂಜಾರ್ತಿ, ಸ್ಥಳೀಯ ದಾನಿ ರತ್ನ ಬಾಬು ಪೂಜಾರಿ ಮದಗ ಲೇಔಟ್ ಉಪ್ಪೂರು, ನಾಗರಿಕ ವೇದಿಕೆ ಅಧ್ಯಕ್ಷ ಶರತ್ ಪೂಜಾರಿ ಹಾಗೂ ಗೌರವಾಧ್ಯಕ್ಷ ಹರೀಶ್ ಅಮೀನ್ ಉಪಸ್ಥಿತರಿದ್ದರು.
ಸಮಾಜ ಸೇವೆಯ ಮೂಲಕ ಗಮನ ಸೆಳೆದ ನಿತ್ಯಾನಂದ ಒಳಕಾಡು ಹಾಗೂ ವನಜಾ ಪೂಜಾರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಲೇಔಟ್ನ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ನಾಗರಿಕ ವೇದಿಕೆ ಕಾರ್ಯದರ್ಶಿ ಚೆನ್ನಕೇಶವ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಹರೀಶ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತ ಶೇಟ್ ವಂದಿಸಿದರು. ವಾಣಿಶ್ರೀ ಗೋವಿಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಗಣೇಶೋತ್ಸವದ ಅಂಗವಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಅವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶ್ರೀ ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಸಂಜೆ 7 ಗಂಟೆಯಿಂದ ಲೇಔಟ್ ಪರಿಸರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ವಿವಿಧ ವಾದ್ಯಮೇಳ ಹಾಗೂ ಭಕ್ತಿಭಾವದೊಂದಿಗೆ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಜಲಸ್ತಂಭನ ಮಾಡುವ ಮೂಲಕ ನಾಲ್ಕನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಸಾಂಪ್ರದಾಯಿಕವಾಗಿ ತೆರೆ ಎಳೆಯಲಾಯಿತು.
ಸ್ಥಳೀಯ ನಾಗರಿಕರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಗಣೇಶೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

