ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರಿನ ಕೊಟ್ಟಾರ ನಿವಾಸಿ ಸಂತೋಷ್ ಕುಮಾರ್ ಶೆಟ್ಟಿ, ಬಿನ್ ಕೆ. ರಾಘವ ಶೆಟ್ಟಿ ಅವರನ್ನು ಮುಡಾ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
ಈ ಹಿಂದೆ ಮುಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸದಾಶಿವ ಉಲ್ಲಾಳ್ ಅವರ ಸ್ಥಾನಕ್ಕೆ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 3ರ ಉಪಕಲಂ 3(ಎ) ಹಾಗೂ 3(4)ರ ಅಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ನೇಮಕಾತಿ ಮಾಡಲಾಗಿದೆ.
ಆಗಸ್ಟ್ 29, 2026ರಿಂದಲೇ ನೇಮಕಾತಿ ಜಾರಿಗೆ ಬರಲಿದ್ದು, ಸರ್ಕಾರದ ಮುಂದಿನ ಆದೇಶ ಹೊರಬರುವವರೆಗೆ ಸಂತೋಷ್ ಕುಮಾರ್ ಶೆಟ್ಟಿ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಕುರಿತು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಕೆ. ಅವರು ಅಧಿಸೂಚನೆ ಹೊರಡಿಸಿದ್ದಾರೆ. ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯ ಪ್ರತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವುದರ ಜೊತೆಗೆ ಕರ್ನಾಟಕ ಇ-ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ.
ಮುಡಾ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ ಅವರ ನೇಮಕಾತಿಯಿಂದ ಮಂಗಳೂರು ನಗರದ ನಗರಾಭಿವೃದ್ಧಿ, ಯೋಜನಾ ಕಾರ್ಯಗಳು ಹಾಗೂ ಮೂಲಸೌಕರ್ಯ ಸಂಬಂಧಿತ ಯೋಜನೆಗಳಿಗೆ ಹೊಸ ವೇಗ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
