ಮಂಗಳೂರು: ಸಹಕಾರ ಸಂಘಗಳ ಕಾನೂನು, ಭದ್ರತೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಹಕಾರಿ ಸಂಘಗಳ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಆಗಸ್ಟ್ 29ರಂದು ಮಂಗಳೂರಿನ ಆತ್ಮಾಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರ ಸಂಘಗಳಿಗೆ ವಿಶೇಷ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಇವರ ಸಹಯೋಗದೊಂದಿಗೆ ಆತ್ಮಾಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡೀಲ್, ಮಂಗಳೂರು ಇದರ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಆತ್ಮಾಶಕ್ತಿ ಸೌಧದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಹಕಾರ ಸಂಘಗಳಿಗೆ ಸಂಬಂಧಿಸಿದ ಕಾನೂನು ವಿಚಾರಗಳು, ಸಂಘಗಳ ಭದ್ರತೆ ಮತ್ತು ಸುರಕ್ಷತಾ ಕ್ರಮಗಳು, ಕಾನೂನು ಸಮಸ್ಯೆಗಳಿಗೆ ಲಭ್ಯವಿರುವ ನೆರವು ಹಾಗೂ ಸಹಕಾರ ಸಂಘಗಳ ಸುಭದ್ರತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಗುವುದು. ಸಹಕಾರ ಸಂಘಗಳ ಕಾರ್ಯನಿರ್ವಹಣೆಯಲ್ಲಿ ಎದುರಾಗಬಹುದಾದ ಕಾನೂನು ಮತ್ತು ಸುರಕ್ಷತಾ ಸವಾಲುಗಳ ಕುರಿತು ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಬೆಳಗ್ಗೆ 10ಕ್ಕೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಲ್. ತಾರಾನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆತ್ಮಾಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ರಾಂಜನ್ ಬೋಳಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಜೈಬುನ್ನೀಸಾ, ಸಹಕಾರ ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕರಾದ ಸಿ.ಕೆ ಸಲೀಮ್, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕರಾದ ಎಚ್.ಎನ್ ರಮೇಶ್, ಕಂಕನಾಡಿ ನಗರ ಪೊಲೀಸ್ ಥಾಣೆಯ ಇನ್ಸ್ಪೆಕ್ಟರ್ ಗುರುರಾಜ್, ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಳೋಟು, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಜಗದೀಶ್ ಶೇಣಾವಾ, ಪಾಲಿಸಿ ಗ್ರೇಸ್ ಇನ್ಸೂರೆನ್ಸ್ನ ಮುಖ್ಯ ವ್ಯವಹಾರ ಅಧಿಕಾರಿ ರಾಹುಲ್ ಶೆಟ್ಟಿ ಭಾಗವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ವಿಷಯಗಳ ಕುರಿತು ತಜ್ಞರಿಂದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿವೆ. 10.45ರಿಂದ 11.30ರ ತನಕ ಕಾಯಂ ಜನತಾ ನ್ಯಾಯಾಲಯದ ಬಗ್ಗೆ ಕಾನೂನು ಅರಿವು ಮಾಹಿತಿ, 11.30ರಿಂದ 12.15ರ ತನಕ ಸಹಕಾರ ಸಂಘಗಳು ಅನುಸರಿಸಬೇಕಾದ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳು, 12.15ರಿಂದ ಮಧ್ಯಾಹ್ನ 1ರ ತನಕ ಸಹಕಾರ ಸಂಘಗಳ ಸುಭದ್ರ ಭವಿಷ್ಯಕ್ಕಾಗಿ ವಿಮಾ ಯೋಜನೆಗಳ ಲಾಭಗಳು ಮತ್ತು ಪ್ರಾಮುಖ್ಯತೆ ಇವುಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಮಧ್ಯಾಹ್ನ 1ರಿಂದ 1.30ರ ತನಕ ಪ್ರಶ್ನಾವಳಿ ಹಾಗೂ ಸಂವಾದ ನಡೆಯಲಿದೆ ಎಂದು ಆತ್ಮಾಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಸೌಮ್ಯ ವಿಜಯ್ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.




