ಮಂಗಳೂರು: ಕಳೆದ 36 ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾ ವಿದ್ಯಾರ್ಥಿಗಳಿಂದ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಸಂಗ್ರಹಿಸಿರುವ ಹಣದ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕ್ಲಬ್ನ ಮಾಜಿ ಕಾರ್ಯದರ್ಶಿ ಆರ್. ಧನರಾಜ್ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಾ ಸ್ವಿಮ್ಮಿಂಗ್ ಕ್ಲಬ್ 1990ರವರೆಗೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ನೋಂದಣಿಯಾಗಿತ್ತು. ಬಳಿಕ ಕ್ಲಬ್ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಕ್ಕಳಿಂದ ಮತ್ತು ಸಾರ್ವಜನಿಕರಿಂದ ವಿವಿಧ ರೂಪದಲ್ಲಿ ಹಣ ಸಂಗ್ರಹಿಸುತ್ತಿದ್ದು, ಈ ಹಣದ ಸಮರ್ಪಕ ಲೆಕ್ಕಪತ್ರ ನಿರ್ವಹಿಸಲಾಗಿಲ್ಲ ಎಂಬ ಗಂಭೀರ ಆರೋಪ ಮಾಡಿದರು.
ಕಳೆದ 36 ವರ್ಷಗಳ ಅವಧಿಯಲ್ಲಿ ಸುಮಾರು ₹5 ಕೋಟಿಗೂ ಅಧಿಕ ಹಣ ಸಂಗ್ರಹವಾಗಿರುವ ಸಾಧ್ಯತೆಯಿದ್ದು, ಈ ಹಣದ ಬಳಕೆ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ಪಾರದರ್ಶಕತೆ ಅಗತ್ಯವಾಗಿದೆ ಎಂದು ಧನರಾಜ್ ಹೇಳಿದರು.
ಕ್ಲಬ್ನ ಆದಾಯ, ವೆಚ್ಚ, ಬ್ಯಾಂಕ್ ಖಾತೆಗಳು, ಶುಲ್ಕ ಸಂಗ್ರಹ ಹಾಗೂ ಇತರ ಹಣಕಾಸು ವ್ಯವಹಾರಗಳ ಕುರಿತು ಸಂಬಂಧಪಟ್ಟ ಇಲಾಖೆಗಳಿಂದ ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು. ತನಿಖೆಯಲ್ಲಿ ಅಕ್ರಮ ಅಥವಾ ಅವ್ಯವಹಾರ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೆ, ಮಂಗಳಾ ಸ್ವಿಮ್ಮಿಂಗ್ ಕ್ಲಬ್ಗೆ ನೀಡಲಾಗಿರುವ ಪರವಾನಗಿ ಹಾಗೂ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ನ ಮಾನ್ಯತೆಯನ್ನು ಮರುಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಮಾನ್ಯತೆಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಕ್ಲಬ್ಗೆ ನೀಡಿರುವ ಅವಕಾಶದ ಬಗ್ಗೆಯೂ ಪರಿಶೀಲನೆ ನಡೆಸಿ, ನಿಯಮಾನುಸಾರತೆ ಇಲ್ಲದಿದ್ದರೆ ಆ ಅವಕಾಶವನ್ನು ರದ್ದುಪಡಿಸಬೇಕು ಎಂದು ಧನರಾಜ್ ಮನವಿ ಮಾಡಿದರು.
ಕ್ಲಬ್ನ ಹೆಸರಿನಲ್ಲಿ ಇರುವ ಎಲ್ಲಾ ಬ್ಯಾಂಕ್ ಖಾತೆಗಳು, ಹಣದ ಒಳಹರಿವು ಮತ್ತು ಹೊರಹರಿವು ಹಾಗೂ ಸದಸ್ಯರು ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕದ ವಿವರಗಳನ್ನು ಪರಿಶೀಲಿಸಬೇಕು. ಹಣಕಾಸಿನ ಅಕ್ರಮ ಕಂಡುಬಂದಲ್ಲಿ ಕಾನೂನುಬದ್ಧವಾಗಿ ಖಾತೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
“ಸಾರ್ವಜನಿಕರು ಹಾಗೂ ಕ್ರೀಡಾ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಹಣದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಇರಬೇಕು. ಹಣಕಾಸಿನ ವ್ಯವಹಾರಗಳ ಕುರಿತು ಸತ್ಯಾಂಶವನ್ನು ಬಹಿರಂಗಪಡಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು” ಎಂದು ಆರ್. ಧನರಾಜ್ ಆಗ್ರಹಿಸಿದರು.
ಮಂಗಳಾ ಸ್ವಿಮ್ಮಿಂಗ್ ಕ್ಲಬ್ನ ಹಣಕಾಸು ವ್ಯವಹಾರಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಅವರು ಮನವಿ ಮಾಡಿದರು.

