ಬಿಸಿರೋಡ್, ಜು.31: ಜೆಡಿಎಸ್ ಮುಖಂಡ ರತ್ನಾಕರ್ ಸುವರ್ಣ ಅವರ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ಸುಳ್ಳು ಮರಣ ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹರಡಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಡ್ವಕೇಟ್ ಉಮೇಶ್ ಕುಮಾರ್ ವೈ. ಅವರು, ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ಇಂತಹ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದು ಅತ್ಯಂತ ಬೇಜವಾಬ್ದಾರಿಯ ಕೃತ್ಯವಾಗಿದೆ. ಇದರಿಂದ ಸಂಬಂಧಪಟ್ಟ ವ್ಯಕ್ತಿಯ ಘನತೆಗೆ ಧಕ್ಕೆ ಉಂಟಾಗುವುದಲ್ಲದೆ, ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಸುದ್ದಿಗಳು, ವದಂತಿಗಳು ಹಾಗೂ ಅಪಪ್ರಚಾರಗಳನ್ನು ಹರಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸುಳ್ಳು ಮಾಹಿತಿ ಹರಡುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳು ಸಮಾಜದ ಶಾಂತಿ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುವಂತವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸುಳ್ಳು ಸುದ್ದಿ ಸೃಷ್ಟಿಸಿ ಪ್ರಸಾರ ಮಾಡಿದವರನ್ನು ಪತ್ತೆಹಚ್ಚಿ, ಯಾವುದೇ ಒತ್ತಡ ಅಥವಾ ಮುಲಾಜಿಗೆ ಮಣಿಯದೆ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಮಾದರಿಯಾಗುವಂತಹ ಕ್ರಮ ಜರುಗಿದರೆ ಮಾತ್ರ ಭವಿಷ್ಯದಲ್ಲಿ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ವಹಿಸಬೇಕು. ಸುಳ್ಳು ಸುದ್ದಿಗಳ ಪ್ರಸಾರದಿಂದ ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಜವಾಬ್ದಾರಿಯುತವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವ ಮೂಲಕ ಸಮಾಜದಲ್ಲಿ ಸತ್ಯ ಮತ್ತು ವಿಶ್ವಾಸವನ್ನು ಉಳಿಸಬೇಕೆಂದು ಅಡ್ವಕೇಟ್ ಉಮೇಶ್ ಕುಮಾರ್ ವೈ. ಮನವಿ ಮಾಡಿದ್ದಾರೆ.

