ಉಡುಪಿ, ಜುಲೈ 18: ಮುಂಗಾರು ಮಳೆಯ ತೀವ್ರ ಕೊರತೆಯಿಂದ ಉಡುಪಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿವೆ. ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ನೆರೆ-ಬರ ಅಧ್ಯಯನ ತಂಡದ ಅಧ್ಯಕ್ಷರಾದ ಎಸ್.ಎಲ್. ಭೋಜೇಗೌಡ ಅವರು, ಜಾತ್ಯತೀತ ಜನತಾದಳ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಅವರ ನೇತೃತ್ವದಲ್ಲಿ
ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.

ಬಳಿಕ ಮಾತನಾಡಿದ ಎಸ್.ಎಲ್. ಭೋಜೇಗೌಡ ಅವರು, ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಕಾರಣ ರೈತರು ಬಿತ್ತನೆ ಮಾಡಿದ ಭತ್ತ ಸೇರಿದಂತೆ ಹಲವು ಬೆಳೆಗಳು ಒಣಗಿ ನಾಶವಾಗುತ್ತಿವೆ. ಅನೇಕ ಪ್ರದೇಶಗಳಲ್ಲಿ ಬಿತ್ತನೆಯೇ ಸಾಧ್ಯವಾಗದೆ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕುಡಿಯುವ ನೀರು ಹಾಗೂ ಕೃಷಿಗೆ ಅಗತ್ಯವಾದ ನೀರಿನ ಕೊರತೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಮೀಣ ಜನತೆ ಸಂಕಷ್ಟದ ಜೀವನ ನಡೆಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಳಲು ಮತ್ತು ಸ್ಥಳ ಪರಿಶೀಲನೆ ನಡೆಸಲು ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮರ್ಪಕವಾಗಿ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಧಾವಿಸಿ, ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.

ಉಡುಪಿ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿರುವುದರಿಂದ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಸಮರ್ಪಕ ಪರಿಹಾರ, ಕೃಷಿ ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಮನ್ನಾ ಸೇರಿದಂತೆ ಅಗತ್ಯ ನೆರವು ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗೆ ಬೀಜ, ರಸಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡುವ ಜೊತೆಗೆ ಅಧಿಕಾರಿಗಳು ನಿರಂತರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅವರು ಹೇಳಿದರು.
ಈ ಕುರಿತು ವಿಧಾನ ಪರಿಷತ್ತಿನಲ್ಲಿಯೂ ಸರ್ಕಾರದ ಗಮನ ಸೆಳೆದು, ಉಡುಪಿ ಜಿಲ್ಲೆಯ ರೈತರ ಸಮಸ್ಯೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಧ್ವನಿ ಎತ್ತುವುದಾಗಿ ಎಸ್.ಎಲ್. ಭೋಜೇಗೌಡ ಭರವಸೆ ನೀಡಿದರು. ವಿವಿಧ ಪ್ರದೇಶಗಳ ಸಮಸ್ಯೆಗಳ ಮತ್ತು ಜಿಡಿಎಸ್ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳನ್ನು ಜೆಡಿಎಸ್ ನಿಯೋಗದೊಂದಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು


ಈ ಸಂದರ್ಭದಲ್ಲಿ ಮುಖಂಡರುಗಳಾದ ಉದಯ ಹೆಗ್ಡೆ ಮುಲ್ಲಾರ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜಪ್ಪು, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಯುವ ಘಟಕ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ,ಮೀನುಗಾರ ಘಟಕ ರಾಜ್ಯಾಧ್ಯಕ್ಷ ರತ್ನಾಕರ್ ಸುವರ್ಣ, ಉದಯ ಆರ್. ಶೆಟ್ಟಿ, ತಾಲೂಕು ಅಧ್ಯಕ್ಷರುಗಳಾದ ಉಡುಪಿ ತಾಲೂಕು ಅದ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ , ಹೆಬ್ರಿ ತಾಲೂಕು ಅದ್ಯಕ್ಷ ಶ್ರೀಕಾಂತ್ ಪೂಜಾರಿ ಕಚ್ಚೂರು, ಕಾಪು ತಾಲೂಕು ಅದ್ಯಕ್ಷ ದೇವರಾಜ್ ತೊಟ್ಟೆಂ, ಮಹಿಳಾ ಜಿಲ್ಲಾ ಕಾರ್ಯದ್ಯಕ್ಷೆ ಅನಸೂಯ ಶೆಟ್ಟಿ, ಶ್ರೀಕಿರಾಜ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

