ಮಂಗಳೂರು, ಜುಲೈ 16: ರಾಜ್ಯದಲ್ಲಿ ಮುಂಗಾರು ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ರಚಿಸಲಾದ ಜನತಾದಳ (ಜಾತ್ಯತೀತ) ಅಧ್ಯಯನ ತಂಡದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರು ಎಸ್.ಎಲ್. ಭೋಜೆಗೌಡ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬೆಳಿಗ್ಗೆ ಜಿಲ್ಲೆಯ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ,ಯುವ ಘಟಕ ಜಿಲ್ಲಾದ್ಯಕ್ಷ ಅದ್ಯಕ್ಷರಾದ ಅಕ್ಷಿತ್ ಸುವರ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು , ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖ ಪದಾಧಿಕಾರಿಗಳೊಂದಿಗೆ ನಿಯೋಗವು ಇತ್ತೀಚೆಗೆ ಭೂಕುಸಿತ ಸಂಭವಿಸಿ ಅಮೂಲ್ಯ ಜೀವಹಾನಿ ಉಂಟಾಗಿದ್ದ ನಾಗೋರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.



ಭೂಕುಸಿತದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳನ್ನು ಭೇಟಿ ಮಾಡಿ ಅವರ ನೋವು-ನಲಿವುಗಳನ್ನು ಆಲಿಸಿದ ಎಸ್.ಎಲ್. ಭೋಜೆಗೌಡ ಅವರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸ್ಥಳೀಯ ಕಾರ್ಪೋರೇಟರ್ ಸಂದೀಪ್ ಗರೋಡಿ ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಮಳೆಗಾಲದಲ್ಲಿ ಎದುರಾಗುತ್ತಿರುವ ಅಪಾಯಗಳು, ಭೂಕುಸಿತಕ್ಕೆ ಕಾರಣವಾಗಿರುವ ಅಂಶಗಳು ಹಾಗೂ ತಕ್ಷಣ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ, ಪುನರ್ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಅಪಾಯದ ಅಂಚಿನಲ್ಲಿರುವ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಶಾಶ್ವತ ತಡೆಗೋಡೆ, ನೀರು ಹರಿಸುವ ವ್ಯವಸ್ಥೆ ಹಾಗೂ ಭೂಕುಸಿತ ತಡೆ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಅನಂತರ ಅಧ್ಯಯನ ತಂಡವು ಸೋಮೇಶ್ವರ ಬಟ್ಟಪಾಡಿ ಪ್ರದೇಶಕ್ಕೆ ಭೇಟಿ ನೀಡಿ ತೀವ್ರ ಕಡಲುಕೊರೆತದಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಪರಿಶೀಲಿಸಿತು. ಸಮುದ್ರದ ಅಲೆಗಳ ಅಬ್ಬರದಿಂದ ಮನೆಗಳು, ರಸ್ತೆಗಳು ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಉಂಟಾಗುತ್ತಿರುವ ಹಾನಿಯನ್ನು ಸ್ಥಳದಲ್ಲೇ ವೀಕ್ಷಿಸಿದ ತಂಡವು ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿತು.

ವರ್ಷದಿಂದ ವರ್ಷಕ್ಕೆ ಕಡಲುಕೊರೆತ ತೀವ್ರಗೊಳ್ಳುತ್ತಿದ್ದು, ಜನರು ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಬಗ್ಗೆ ಸ್ಥಳೀಯರಾದ ಸೇವ್ ಬಟ್ಟಪಾಡಿ ಅದ್ಯಕ್ಷರಾದ ಸುಕೇಶ್ ಜಿ ಕೆ ಉಚ್ಚಿಲ್ ವಿವರಿಸಿದರು.
ಎಸ್.ಎಲ್. ಭೋಜೆಗೌಡ ಅವರು ಸರ್ಕಾರವು ಕಡಲುಕೊರೆತ ತಡೆಗೆ ವೈಜ್ಞಾನಿಕ ಹಾಗೂ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಬೇಕು, ಅಗತ್ಯವಿರುವ ಕಡೆ ತಕ್ಷಣ ತಡೆಗೋಡೆ ನಿರ್ಮಾಣ, ಸಮುದ್ರ ಸಂರಕ್ಷಣಾ ಕಾಮಗಾರಿಗಳನ್ನು ವೇಗಗೊಳಿಸುವುದು ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಅಧ್ಯಯನ ತಂಡವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಕವರಿಗೆ ಭೇಟಿ ನೀಡಿ, ನಾಗೋರಿ ಭೂಕುಸಿತ ಹಾಗೂ ಸೋಮೇಶ್ವರ ಕಡಲುಕೊರೆತ ಸೇರಿದಂತೆ ಜಿಲ್ಲೆಯ ವಿವಿಧ ಮಳೆ ಹಾನಿ ಪ್ರದೇಶಗಳ ಕುರಿತು ಸಮಗ್ರ ಮನವಿ ಸಲ್ಲಿಸಿತು. ಸ್ಥಳ ಪರಿಶೀಲನೆಯ ವೇಳೆ ಕಂಡುಬಂದ ಸಮಸ್ಯೆಗಳು, ಸಾರ್ವಜನಿಕರಿಂದ ಪಡೆದ ಮಾಹಿತಿಗಳು ಹಾಗೂ ತುರ್ತಾಗಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿವರವಾದ ಚರ್ಚೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿ, ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವುದರೊಂದಿಗೆ ಉಳಿದಿರುವ ಸಮಸ್ಯೆಗಳಿಗೂ ಆದ್ಯತೆ ನೀಡಿ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೀನುಗಾರ ಘಟಕ ರಾಜ್ಯದ್ಯಕ್ಷರಾದ ರತ್ನಕರ್ ಸುವರ್ಣ , ಕಾರ್ಯದ್ಯಕ್ಷ ಇಕ್ಬಲ್ ಮುಲ್ಕಿ , ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಾದ್ಯಕ್ಷರಾದ ಪುಷ್ಪರಾಜನ್,ಯುವ ಘಟಕ ಉತ್ತರ ಕ್ಷೇತ್ರ ಅದ್ಯಕ್ಷ ರತೀಶ್ ಕರ್ಕೇರ ,ಮಂಗಳೂರು ವಿಧಾನ ಸಭಾ ಕ್ಷೇತ್ರಾದ್ಯಕ್ಷ ಪ್ರಕಾಶ್ ಅಸೈಗೋಳಿ,ಕಾನೂನು ಘಟಕ ಅದ್ಯಕ್ಷ ಭಾರತಿ ಪುಷ್ಪರಾಜನ್, ಜೆಡಿಎಸ್ ಮುಖಂಡರಾದ ಉಮೇಶ್ ವೈ ಗೌಡ , ಸುಮಿತ್ ಸುವರ್ಣ ,ಯುವ ಮುಖಂಡ ಸುಷಂತ್, ಜಾವೀದ್ , ಸುಮತಿ ಹೆಗ್ಡೆ, ಪ್ರಶಾಂತ್ ಭಟ್ ಕಡಬ, ಪ್ರಾನ್ಸಿಸ್ , ನಜೀರ್ ಸಾಮಾಣಿಗೆ ಮತ್ತಿತರರು ಉಪಸ್ಥಿತರಿದ್ದರು






