ಮಂಗಳೂರು, ಜೂನ್ 25: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಹಿರಿಯ ರಾಜಕಾರಣಿ ಹಿಲ್ಡಾ ಆಳ್ವಾ ಅವರು ಗುರುವಾರ (ಜೂನ್ 25) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಹಿಲ್ಡಾ ಆಳ್ವ ಅವರು ಮಂಗಳೂರು ನಗರದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಾಯಕರಾಗಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಸೇವೆ ಸಲ್ಲಿಸುವ ಮೂಲಕ ನಗರದ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಶ್ರಮಿಸಿದ್ದರು. ಸರಳ ವ್ಯಕ್ತಿತ್ವ, ಜನಸ್ನೇಹಿ ನಡೆ ಹಾಗೂ ಸಾರ್ವಜನಿಕ ಸೇವೆಯ ಮೂಲಕ ಅವರು ಅಪಾರ ಜನಾಭಿಮಾನವನ್ನು ಗಳಿಸಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಹಿಲ್ಡಾ ಆಳ್ವ ಅವರ ಅಂತ್ಯಕ್ರಿಯೆಯ ಕುರಿತು ಕುಟುಂಬದವರು ಶೀಘ್ರದಲ್ಲೇ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಅವರ ಅಗಲಿಕೆಯಿಂದ ಮಂಗಳೂರು ನಗರದ ರಾಜಕೀಯ ಮತ್ತು ಸಾಮಾಜಿಕ ವಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜೆಡಿಎಸ್ ಜಿಲ್ಲಾದ್ಯಕ್ಷರಾದ ಜಾಕೆ ಮಾಧವ ಗೌಡ , ರಾಜ್ಯ ಉಪಾದ್ಯಕ್ಷರಾದ ಎಂ.ಬಿ. ಸದಾಶಿವ,ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ , ಜಿಲ್ಲಾ ಕಾರ್ಯದ್ಯಕ್ಷ ರಾದ ಇಕ್ಬಲ್ ಮುಲ್ಕಿ, ವಸಂತ ಪೂಜಾರಿ , ಶಶಿರಾಜ್ ಶೆಟ್ಟಿ ಶೆಟ್ಟಿ ಕೊಳಂಬೆ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು , ಯುವ ಘಟಕ ಜಿಲ್ಲಾದ್ಯಕ್ಷ ಅಕ್ಷಿತ್ ಸುವರ್ಣ, ರಾಜ್ಯ ಮೀನುಗಾರ ಘಟಕ ಅದ್ಯಕ್ಷ ರತ್ನಕರ್ ಸುವರ್ಣ , ಮಹಿಳಾ ಘಟಕ ಅದ್ಯಕ್ಷೆ ರಮೀಜಾ ನಾಸೀರ್ ಮತ್ತಿತರ ಜೆಡಿಎಸ್ ಮುಖಂಡರು ಸಂತಾಪ ಸೂಚಿಸಿದಾರೆ







