ಮಂಗಳೂರು, ಜೂನ್ 23: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಹೊಸ ಪಡಿತರ ಚೀಟಿ (ರೇಷನ್ ಕಾರ್ಡ್) ವಿತರಣೆಯ ಪ್ರಕ್ರಿಯೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿಯೋಗವು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳ ಮೂಲಕ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಮನವಿಯಲ್ಲಿ, ರಾಜ್ಯದಾದ್ಯಂತ ಸಾವಿರಾರು ಅರ್ಹ ಕುಟುಂಬಗಳು ಹೊಸ ಪಡಿತರ ಚೀಟಿ ಪಡೆಯಲು ಎರಡು ವರ್ಷಗಳಿಂದ ಕಾಯುತ್ತಿರುವುದರಿಂದ ಸರ್ಕಾರದ ವಿವಿಧ ಜನಪರ ಯೋಜನೆಗಳು ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಲಾಯಿತು. ಹೊಸದಾಗಿ ವಿವಾಹವಾದ ದಂಪತಿಗಳು, ಪ್ರತ್ಯೇಕ ಕುಟುಂಬವಾಗಿ ಜೀವನ ಆರಂಭಿಸಿರುವವರು, ಬಾಡಿಗೆ ಮನೆಗಳಲ್ಲಿ ವಾಸಿಸುವವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸೇರಿದಂತೆ ಅನೇಕ ನಾಗರಿಕರು ಪಡಿತರ ಚೀಟಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಯಿತು.
ಪಡಿತರ ಚೀಟಿ ಕೇವಲ ಆಹಾರ ಧಾನ್ಯಗಳ ವಿತರಣೆಗೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯ ಸೇವೆಗಳು, ವಿದ್ಯಾರ್ಥಿವೇತನ, ವಸತಿ ಯೋಜನೆಗಳು, ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯಲು ಇದು ಪ್ರಮುಖ ದಾಖಲೆಯಾಗಿದೆ. ಹೀಗಾಗಿ ಹೊಸ ಪಡಿತರ ಚೀಟಿ ವಿತರಣೆಯಲ್ಲಿನ ವಿಳಂಬದಿಂದ ಅನೇಕ ಕುಟುಂಬಗಳು ತಮ್ಮ ಹಕ್ಕುಗಳು ಮತ್ತು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ ಎಂದು ನಿಯೋಗ ಆತಂಕ ವ್ಯಕ್ತಪಡಿಸಿತು.
ಸರ್ಕಾರವು ತಕ್ಷಣವೇ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು, ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಚೀಟಿಗಳನ್ನು ವಿತರಿಸಬೇಕು, ಹೊಸದಾಗಿ ವಿವಾಹವಾದ ದಂಪತಿಗಳು ಹಾಗೂ ಪ್ರತ್ಯೇಕ ಕುಟುಂಬಗಳಿಗೆ ಆದ್ಯತೆ ನೀಡಬೇಕು, ಅರ್ಜಿ ಮತ್ತು ಮಂಜೂರಾತಿ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಹಾಗೂ ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದಂತೆ ಸ್ಪಷ್ಟ
ಕಾಲಮಿತಿಯನ್ನು ಪ್ರಕಟಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಇದೇ ವೇಳೆ ಸಾರ್ವಜನಿಕರು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಆನ್ಲೈನ್ ಹಾಗೂ ನೇರ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಜನಸ್ನೇಹಿ ಆಡಳಿತ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಯಿತು.
ಜನಸಾಮಾನ್ಯರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅರ್ಹ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊಸ ಪಡಿತರ ಚೀಟಿ ವಿತರಣೆಗೆ ತಕ್ಷಣ ಅವಕಾಶ ಕಲ್ಪಿಸಬೇಕು ಎಂದು ಜೆಡಿಎಸ್ ನಾಯಕರು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಸಂತ ಪೂಜಾರಿ , ಶಶಿರಾಜ್ ಶೆಟ್ಟಿ ಕೊಳಂಬೆ ,ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು , ಮೀನುಗಾರ ಘಟಕದ ರಾಜ್ಯದ್ಯಕ್ಷ ರತ್ನಾಕರ ಸುವರ್ಣ, ಮಹಿಳಾ ಜಿಲ್ಲಾಧ್ಯಕ್ಷೆ ರಮೀಝ್ ನಾಸೀರ್ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಜೀಜ್ ಮಲಾರ್, ಮಹಿಳಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಜೈನ್, ವಿನ್ಸೇಂಟ್ ಡಿಸೋಜ , ಮಹಿಳಾ ಉಪಾದ್ಯಕ್ಷೆರಾದ ಚೂಡಮಣಿ, ಮತ್ತು ಶಾರದ ಶೆಟ್ಟಿ , ಜಾವೀದ್ ಸೆಲಿಂ , ಜೆಪ್ಪು ಇಬ್ರಾಹಿಂ , ಸೆಲೀಂ ಅಬ್ದುಲ್ ಕರೀಂ ಜಪ್ಪು , ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

