
ಮಂಗಳೂರು, ಜೂನ್ 16: ಜನತಾದಳ ಜಾತ್ಯಾತೀತ (ಜೆಡಿಎಸ್) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ, ಸಮಾಜಸೇವಕ ಹಾಗೂ ಈ ಹಿಂದೆ ವಿದ್ಯಾರ್ಥಿ ಜನತಾದಳ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿನೋಧರ ಪೂಜಾರಿ ಅವರನ್ನು ಭಾರತ ಸರಕಾರದ ಉಕ್ಕು ಮತ್ತು ಕೈಗಾರಿಕ ಸಚಿವ ಮತ್ತು ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ಮಾರ್ಗದರ್ಶನದ ಮೇರೆಗೆ ನೇಮಕಗೊಳಿಸಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿನೋಧರ ಪೂಜಾರಿ ಅವರು ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದು, ಸಮಾಜದ ವಿವಿಧ ವರ್ಗಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಹಾಯ-ಸಹಕಾರ ನೀಡುತ್ತಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ನ್ಯಾಯವಾದಿಯಾಗಿ ಜನಸಾಮಾನ್ಯರ ಹಕ್ಕುಗಳ ರಕ್ಷಣೆಗಾಗಿ ಹಾಗೂ ಕಾನೂನು ಸಲಹೆ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ಸಂಘಟನಾ ಕ್ಷೇತ್ರದಲ್ಲಿಯೂ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ಪ್ರಸ್ತುತ ಅವರು ಯುವ ವಾಹಿನಿ ಬಜ್ಪೆ ಘಟಕದ ಸ್ಥಾಪಕ ಅಧ್ಯಕ್ಷರಾಗಿ, ಕಾಂತಬಾರೆ-ಬೂದಬಾರೆ ಜನ್ಮಕ್ಷೇತ್ರ (ರಿ) ಕೊಲ್ಲೂರು-ವಯ ಮುಲ್ಕಿ ಇದರ ಅಧ್ಯಕ್ಷರಾಗಿ, ಕೊಳಂಬೆ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ, ಬಜ್ಪೆ ಬಿಲ್ಲವ ಸಂಘದ ಕಾನೂನು ಸಲಹೆಗಾರರಾಗಿ, ಸರಿತಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಲ್ಲದೆ ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ಸಲಹೆಗಾರರಾಗಿ, ಕೊಳಂಬೆ-ಉಣಿಲೆ ಕೋರ್ದಬ್ಬು ದೈವಸ್ಥಾನದ ಕಾರ್ಯಾಧ್ಯಕ್ಷರಾಗಿ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿ, ಸಂಘಟನೆ ಬಲವರ್ಧನೆ ಹಾಗೂ ಪಕ್ಷದ ತತ್ವ-ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಸೇವೆ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಪಕ್ಷ ವ್ಯಕ್ತಪಡಿಸಿದೆ.
ವಿನೋಧರ ಪೂಜಾರಿ ಅವರ ಸಮಾಜಮುಖಿ ಕಾರ್ಯಚಟುವಟಿಕೆಗಳು, ಸಂಘಟನಾ ಸಾಮರ್ಥ್ಯ, ಜನಪರ ಸೇವಾ ಮನೋಭಾವ ಹಾಗೂ ಪಕ್ಷದ ಮೇಲಿನ ನಿಷ್ಠೆಯನ್ನು ಪರಿಗಣಿಸಿ, ಅವರನ್ನು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ತಿಳಿಸಿದ್ದಾರೆ.
ಈ ನೇಮಕಾತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿದ್ದಾರೆ.

