ಉಡುಪಿ, ಜೂನ್ 15: ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಮಹತ್ವದ ಸಂಘಟನಾ ಸಭೆಯು ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜಾ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ವಿವಿಧ ಘಟಕಗಳ ಸಂಘಟನಾ ವಿಸ್ತರಣೆಯ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ಸಭೆಯ ಪ್ರಮುಖ ಘಟ್ಟವಾಗಿ ತುಳುನಾಡ ರಕ್ಷಣಾ ವೇದಿಕೆಯ ಬ್ರಹ್ಮಾವರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಶರತ್ ಅರೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ನೂತನ ಅಧ್ಯಕ್ಷರಿಗೆ ಆದೇಶ ಪತ್ರ ವಿತರಿಸಿ, ಶಾಲು ಹೊದಿಸಿ ಗೌರವ ಸನ್ಮಾನ ಮಾಡಿದರು.
ನಂತರ ಮಾತನಾಡಿದ ಯೋಗೀಶ್ ಶೆಟ್ಟಿ ಜಪ್ಪು ಅವರು, ತುಳುನಾಡಿನ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ಸಂರಕ್ಷಣೆಗಾಗಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ತಳಮಟ್ಟಕ್ಕೆ ವಿಸ್ತರಿಸುವ ಅಗತ್ಯವಿದೆ ಎಂದು ತಿಳಿಸಿದರು. ನೂತನ ಅಧ್ಯಕ್ಷ ಶರತ್ ಅರೂರು ಅವರು ಬ್ರಹ್ಮಾವರ ತಾಲೂಕಿನಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಣಬೆಟ್ಟು ಹಾವಂಜೆ, ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ , ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಅನುಸೂಯ ಶೆಟ್ಟಿ, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ರೋಶನ್ ಡಿಸೋಜಾ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣ ನಾಯಕ್ ಸೇರಿದಂತೆ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯ ಕೊನೆಯಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಮ್ ಡಿಕೋಸ್ಟ ಅವರು ವಂದನಾರ್ಪಣೆ ಸಲ್ಲಿಸಿದರು.
