ಮಂಗಳೂರು, ಜೂನ್ 9: ಜೆಇಇ ಅಡ್ವಾನ್ಸ್-2026 ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕ್ (ಎಐಆರ್) 79 ಹಾಗೂ ಜೆಇಇ ಮೈನ್ಸ್-2026 ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕ್ 335 ಗಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೆಂದೂರ್ ವೆಲ್ ನಿವಾಸಿ ಪ್ರತಿಭಾವಂತ ವಿದ್ಯಾರ್ಥಿ ಬಿ. ವಿಶ್ರುತ್ ಕೃಷ್ಣ ಆರ್. ಭಟ್ ಅವರ ಮನೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದೇಶದ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಜೆಇಇ ಅಡ್ವಾನ್ಸ್ನಲ್ಲಿ ವಿಶ್ರುತ್ ಸಾಧಿಸಿರುವ ಯಶಸ್ಸು ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಮುದಾಯಕ್ಕೆ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಟಾಪರ್ ಆಗಿ ಹೊರಹೊಮ್ಮಿರುವುದರ ಜೊತೆಗೆ ಕರ್ನಾಟಕದ ಅಗ್ರ ಹತ್ತು ವಿದ್ಯಾರ್ಥಿಗಳ ಪೈಕಿ ಸ್ಥಾನ ಪಡೆದಿರುವುದು ಜಿಲ್ಲೆಯ ಶೈಕ್ಷಣಿಕ ಸಾಮರ್ಥ್ಯವನ್ನು ರಾಷ್ಟ್ರ ಮಟ್ಟದಲ್ಲಿ ಅನಾವರಣಗೊಳಿಸಿದೆ ಎಂದು ಅವರು ಶ್ಲಾಘಿಸಿದರು.
ಸುರತ್ಕಲ್ ಎನ್ಐಟಿಕೆ (NITK) ಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಬಡೆಕೈ ರಾಮಚಂದ್ರ ಭಟ್ ಹಾಗೂ ಮಂಗಳೂರಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪೂರ್ಣಿಮಾ ಆರ್. ಭಟ್ ದಂಪತಿಯ ಪುತ್ರನಾಗಿರುವ ವಿಶ್ರುತ್ ಕೃಷ್ಣ
ತಮ್ಮ ಪರಿಶ್ರಮ, ಏಕಾಗ್ರತೆ ಮತ್ತು ನಿರಂತರ ಅಧ್ಯಯನದ ಮೂಲಕ ಈ ಅಪೂರ್ವ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಶಿಸ್ತು ಮತ್ತು ಗುರಿ ಸಾಧನೆಯ ಸಂಕಲ್ಪ ಇದ್ದರೆ ಯಾವುದೇ ಎತ್ತರವನ್ನು ತಲುಪಬಹುದು ಎಂಬುದಕ್ಕೆ ವಿಶ್ರುತ್ ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಮುಂದಿನ ಶೈಕ್ಷಣಿಕ ಪಯಣ ಯಶಸ್ವಿಯಾಗಲಿ, ಎಲ್ಲಾ ಕನಸುಗಳು ನನಸಾಗಲಿ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಮಹತ್ತರ ಸಾಧನೆಗಳ ಮೂಲಕ ಜಿಲ್ಲೆ, ರಾಜ್ಯ ಮತ್ತು ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶಾಸಕ ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ಸ್ಮರಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

