ಉಡುಪಿ, ಜೂನ್ 4: ಸಮಾಜಮುಖಿ ಚಟುವಟಿಕೆಗಳು, ಸೇವಾ ಮನೋಭಾವ ಹಾಗೂ ಸಂಘಟನಾ ಕೌಶಲ್ಯದ ಮೂಲಕ ಜಿಲ್ಲೆಯಾದ್ಯಂತ ಗುರುತಿಸಿಕೊಂಡಿರುವ ಲಯನ್ ಲೂಯಿಸ್ ಲೋಬೊ ಅವರು ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಸಿ ಇದರ ಪ್ರಾಂತ್ಯ 3ರ ಪ್ರಾಂತ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿರುವ ಲೂಯಿಸ್ ಲೋಬೊ ಅವರು ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಸೇವೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಬೆಳವಣಿಗೆ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಅವರು, ಐಎಫ್ಸಿಎ (IFCA) ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಉಡುಪಿ ಜಿಲ್ಲೆಯ ಕ್ರೈಸ್ತ ಉದ್ಯಮಿಗಳ ಸಂಘಟನೆಯ ಸ್ಥಾಪನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಲೂಯಿಸ್ ಲೋಬೊ ಅವರು, ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಪುಣ್ಯಕ್ಷೇತ್ರದ ಉಪಾಧ್ಯಕ್ಷರಾಗಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಲಯನ್ಸ್ ಚಳವಳಿಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿರುವ ಅವರು, ರಾಜ್ಯದ ಪ್ರಥಮ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಾದ ಲಯನ್ಸ್ ಕ್ಲಬ್ ಉಡುಪಿ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಲ್ಲದೆ, ಲಯನ್ಸ್ ಜಿಲ್ಲೆ 317ಸಿ ಕ್ಯಾಬಿನೆಟ್ನಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ಕಳೆದ ವರ್ಷ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಅವರ ಸೇವಾ ಮನೋಭಾವ, ಸಂಘಟನಾ ಅನುಭವ ಹಾಗೂ ನಾಯಕತ್ವ ಗುಣಗಳನ್ನು ಪರಿಗಣಿಸಿ ಪ್ರಸ್ತುತ ಜಿಲ್ಲಾ ಗವರ್ನರ್ ಲಯನ್ ರಾಜೀವ್ ಕೋಟ್ಯಾನ್ ಅವರು ಲಯನ್ ಲೂಯಿಸ್ ಲೋಬೊ ಅವರನ್ನು ಪ್ರಾಂತ್ಯ 3ರ ಪ್ರಾಂತ್ಯಾಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.
ಪ್ರಾಂತ್ಯ 3ರ ವ್ಯಾಪ್ತಿಯಲ್ಲಿ ಲಯನ್ಸ್ ಕ್ಲಬ್ ಉಡುಪಿ, ಉಡುಪಿ ಮಿಡ್ಟೌನ್, ಸುಭಾಸ್ ನಗರ, ಸಂತೆಕಟ್ಟೆ, ಪ್ರಕೃತಿ, ಪರ್ಕಳ, ಕಲ್ಯಾಣಪುರ ಸ್ವರ್ಣ, ಉದ್ಯಾವರ, ಮೂಡುಬೆಳ್ಳೆ, ಬಂಟಕಲ್ ಹಾಗೂ ಬಿ.ಸಿ.ರೋಡ್ ಸೇರಿದಂತೆ ಹಲವು ಲಯನ್ಸ್ ಕ್ಲಬ್ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಸಂಘಟನಾ ಚಟುವಟಿಕೆಗಳ ಉಸ್ತುವಾರಿಯನ್ನು ಲೂಯಿಸ್ ಲೋಬೊ ಅವರು ವಹಿಸಿಕೊಳ್ಳಲಿದ್ದಾರೆ.
ಅವರ ನೇಮಕಕ್ಕೆ ಜಿಲ್ಲೆಯ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾದ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಸೇರಿದಂತೆ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಲಯನ್ಸ್ ಸಂಘಟನೆಗಳ ಮುಖಂಡರು, ಸದಸ್ಯರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದು, ಅವರ ನೇತೃತ್ವದಲ್ಲಿ ಪ್ರಾಂತ್ಯ 3ರ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.






