ಉಡುಪಿ, ಜೂನ್ 4: ಕರಾವಳಿಯ ಹೆಮ್ಮೆಯ ಪುತ್ರ, ವಿಜಯ ಬ್ಯಾಂಕ್ ಸಂಸ್ಥಾಪಕರಾದ ದಿವಂಗತ ಮುಲ್ಕಿ ಸುಂದರರಾಮ ಶೆಟ್ಟಿಯವರ ಸ್ಮಾರಕವನ್ನು ಏಕಾಏಕಿ ತೆರವುಗೊಳಿಸಿರುವ ಕ್ರಮ ಅತ್ಯಂತ ಖಂಡನೀಯ ಎಂದು ಜೆಡಿಎಸ್ ಉಡುಪಿ ಜಿಲ್ಲಾ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಲ್ಕಿ ಸುಂದರರಾಮ ಶೆಟ್ಟಿಯವರು ಕರಾವಳಿ ಭಾಗದ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅವರ ಬದುಕಿಗೆ ದಾರಿದೀಪರಾಗಿದ್ದರು. ವಿಜಯ ಬ್ಯಾಂಕ್ ಅನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ, ಲಕ್ಷಾಂತರ ಉದ್ಯಮಿಗಳು ಹಾಗೂ ಸಾಮಾನ್ಯ ಜನರಿಗೆ ಆರ್ಥಿಕ ನೆರವಾಗುವಂತಹ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಂತಹ ಮಹಾನ್ ವ್ಯಕ್ತಿತ್ವದ ಸ್ಮಾರಕವನ್ನು ಯಾವುದೇ ಪೂರ್ವ ಮಾಹಿತಿ ಅಥವಾ ಸಾರ್ವಜನಿಕರ ಅಭಿಪ್ರಾಯ ಪಡೆಯದೇ ತೆರವುಗೊಳಿಸಿರುವುದು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಇದು ಕರಾವಳಿ ಭಾಗದ ಜನತೆ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿಯವರ ಅಭಿಮಾನಿಗಳಿಗೆ ನೋವುಂಟುಮಾಡುವ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ, ಸೂಕ್ತ ಸರ್ಕಾರಿ ಜಾಗದಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿಯವರ ಭವ್ಯ ಸ್ಮಾರಕವನ್ನು ನಿರ್ಮಿಸಿ, ಅವರ ಸೇವೆ ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಅವರ ಸ್ಮರಣೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಯೋಗೀಶ್ ವಿ. ಶೆಟ್ಟಿ ಆಗ್ರಹಿಸಿದ್ದಾರೆ.





