ಮಂಗಳೂರು, ಮೇ 28 : ಜನತಾದಳ ಜಾತ್ಯತೀತ (JDS) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಪ್ರಮುಖ ಕಾರ್ಯಕರ್ತರ ಮಹಾ ಸಭೆ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಜಾಕೆ ಮಾಧವ ಗೌಡ ಅವರು ಅಧ್ಯಕ್ಷತೆಯಲ್ಲಿ 2026ರ ಮೇ 30ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ನಲ್ಲಿ ನಡೆಯಲಿದೆ.

ಸಭೆಗೆ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರುಗಳಾದ ಶ್ರೀ ಎಂ.ಬಿ. ಸದಾಶಿವ ಹಾಗೂ ಶ್ರೀ ಮಹಮ್ಮದ್ ಕುಂಜ್ಞಿ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಜೊತೆಗೆ ರಾಜ್ಯ ಮುಖಂಡರು, ಜಿಲ್ಲಾ ನಾಯಕರು,ವಿವಿಧ ಘಟಕದ ಅದ್ಯಕ್ಷರುಗಳು, ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಭೆಯ ಆರಂಭದಲ್ಲಿ ಪ್ರಾರ್ಥನೆ ಹಾಗೂ ಸ್ವಾಗತ ಭಾಷಣ ನಡೆಯಲಿದ್ದು, ಆಗಮಿಸಿದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಮತ್ತು ಕಾರ್ಯಕರ್ತರನ್ನು ಆತ್ಮೀಯವಾಗಿ ಸ್ವಾಗತಿಸಲಾಗುವುದು. ಬಳಿಕ ಸಭೆಯನ್ನು ಅಧಿಕೃತವಾಗಿ ಉದ್ಘಾಟಿಸಿ ಪಕ್ಷದ ಮುಂದಿನ ಸಂಘಟನೆ ಚಟುವಟಿಕೆಗಳು ಹಾಗೂ ರಾಜಕೀಯ ಕಾರ್ಯಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
ಸಭೆಯಲ್ಲಿ ಜಿಲ್ಲೆಯ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಪಕ್ಷ ಸಂಘಟನೆ ಬಲಪಡಿಸುವುದು, ಸದಸ್ಯತ್ವ ಅಭಿಯಾನದ ಪ್ರಗತಿ, ವಿವಿಧ ಘಟಕಗಳ ವಿಸ್ತರಣೆ ಹಾಗೂ ಬೂತ್ ಮಟ್ಟದ ಸಂಘಟನೆ ಬಲವರ್ಧನೆ ಕುರಿತಾಗಿ ವಿಶೇಷ ಚರ್ಚೆ ನಡೆಯಲಿದೆ. ಪ್ರತಿ ಗ್ರಾಮ ಪಂಚಾಯತ್ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿಗಳ ರಚನೆ, ಬೂತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಾತಿ ಕುರಿತ ರೂಪುರೇಷೆಗಳನ್ನೂ ಸಭೆಯಲ್ಲಿ ಅಂತಿಮಗೊಳಿಸಲಾಗುವುದು.
ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರ ರೂಪಿಸುವುದು, ಕ್ಷೇತ್ರವಾರು ಜವಾಬ್ದಾರಿಗಳ ಹಂಚಿಕೆ ಹಾಗೂ ಜನಪರ ಹೋರಾಟಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಜಿಲ್ಲೆಯ ಮೂಲಭೂತ ಸೌಕರ್ಯ ಸಮಸ್ಯೆಗಳು, ರೈತರು ಹಾಗೂ ಕಾರ್ಮಿಕರ ಸಂಕಷ್ಟಗಳಿಗೆ ಸಂಬಂಧಿಸಿದ ಹೋರಾಟದ ರೂಪುರೇಷೆಗಳನ್ನೂ ಸಭೆಯಲ್ಲಿ ನಿರ್ಧರಿಸಲಾಗುವುದು.
ಇದೇ ವೇಳೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚೆ ನಡೆಯಲಿದ್ದು, ಪಕ್ಷದ ಚಟುವಟಿಕೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯಯೋಜನೆ ರೂಪಿಸಲಾಗುವುದು.
ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು ತಮ್ಮ ತಮ್ಮ ಕಾರ್ಯ ವರದಿಯನ್ನು ಮಂಡಿಸಲಿದ್ದು, ಮುಂದಿನ ತಿಂಗಳ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಚರ್ಚಿಸಲಿದ್ದಾರೆ. ಕಾರ್ಯಕರ್ತರ ಸಲಹೆ, ಅಭಿಪ್ರಾಯ ಹಾಗೂ ಬೇಡಿಕೆಗಳನ್ನು ಸಂಗ್ರಹಿಸಿ, ಜಿಲ್ಲಾಧ್ಯಕ್ಷರ ವಿವೇಚನೆ ಮೇರೆಗೆ ಕೆಲವು ಮಹತ್ವದ ವಿಶೇಷ ನಿರ್ಣಯಗಳನ್ನು ಅಂಗೀಕರಿಸುವ ಸಾಧ್ಯತೆಯಿದೆ.
ಸಭೆಯ ಅಂತ್ಯದಲ್ಲಿ ಧನ್ಯವಾದ ಸಮರ್ಪಣೆ ನಡೆಯಲಿದ್ದು, ಜನತಾದಳ ಜಾತ್ಯತೀತ (JDS) ದಕ್ಷಿಣ ಕನ್ನಡ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪರವಾಗಿ ಸರ್ವರನ್ನು ಆತ್ಮೀಯವಾಗಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿರುತ್ತಾರೆ.

