
ಕುಂದಾಪುರ :ಜನತಾದಳ (ಜಾತ್ಯತೀತ) ಪಕ್ಷವು ರಾಜ್ಯದ ಅಭಿವೃದ್ಧಿ, ರೈತರ ಪರವಾದ ಯೋಜನೆಗಳು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಕಳೆದ 25 ವರ್ಷಗಳಿಂದ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ ಎಂದು ವಿಧಾನಸಭೆಯ ಮಾಜಿ ಸಭಾಪತಿ ಹಾಗೂ ಹಿರಿಯ ರಾಜಕೀಯ ನಾಯಕ ಕೃಷ್ಣ ರೆಡ್ಡಿ ಅಭಿಪ್ರಾಯಪಟ್ಟರು.

ಕುಂದಾಪುರದ ನೆಹರೂ ಮೈದಾನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಮಿತಿ ವತಿಯಿಂದ ಆಯೋಜಿಸಲಾದ ಜೆಡಿಎಸ್ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೆಡಿಎಸ್ ಪಕ್ಷವು ಅಧಿಕಾರದಲ್ಲಿದ್ದ ಅವಧಿಯಲ್ಲಿ ರಾಜ್ಯದಾದ್ಯಂತ ಜನಪರ ಯೋಜನೆಗಳನ್ನು ಜಾರಿಗೆ ತಂದು ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ರೈತರು, ಕಾರ್ಮಿಕರು, ಮೀನುಗಾರರು ಹಾಗೂ ಬಡವರ ಪರವಾಗಿ ಹಲವಾರು ಕಲ್ಯಾಣಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಪಕ್ಷದ ದೊಡ್ಡ ಸಾಧನೆಯಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಜೆಡಿಎಸ್ ರಾಜ್ಯ ರಾಜಕೀಯದಲ್ಲಿ ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದ್ದು, 2028ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಕೃಷ್ಣ ರೆಡ್ಡಿ ಹೇಳಿದರು. ರಾಜ್ಯದ 150ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಕಾರ್ಯ ನಡೆಯುತ್ತಿದ್ದು, ಯುವಕರಿಗೆ ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ರವಿಕಿರಣ ಮುಂಡೇಶ್ವರ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ರಾಜಕೀಯ ಅನುಭವ, ಸಂಯಮ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಸ್ಮರಿಸಿದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಹಾಗೂ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳು ಇಂದಿಗೂ ಜನಮನದಲ್ಲಿ ಉಳಿದಿವೆ ಎಂದು ಹೇಳಿದರು.


ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಜೆಡಿಎಸ್ ವತಿಯಿಂದ ಸನ್ಮಾನಿಸಲಾಯಿತು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ಸಮಾರಂಭಕ್ಕೆ ಮೆರುಗು ತಂದರು.

ಈ ಸಂದರ್ಭದಲ್ಲಿ ಉಡುಪಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಜಿ, ಉತ್ತರ ಕನ್ನಡ ಜಿಲ್ಲಾ ಅದ್ಯಕ್ಷ ಸೂರಜ್ ಸೋನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್, ವಾಸುದೇವ ರಾವ್, ಸುಧಾಕರ ಶೆಟ್ಟಿ ಕಿರೀಟರಾಜ್, ಪ್ರಕಾಶ್ ಶೆಟ್ಟಿ ಬೆಳೆಂಡಳ್ಳಿ, ಶ್ರೀಕಾಂತ್ ಕಚೂರು, ಶ್ರೀಕಾಂತ್ ಅಡಿಗ ಕೊಲ್ಲೂರು, ಸಂದೇಶ್ ಭಟ್ ಒಪ್ಪುಂದ, ರಾಜೇಂದ್ರ ಉಳ್ಳೂರು, ಅಶ್ಫಕ್, ವೆಂಕಟೇಶ್, ಜಯ ಪೂಜಾರಿ, ಯೋಗೀಶ್ ಶೆಟ್ಟಿ ಜಪ್ಪು , ಧರ್ಮೇಂದ್ರ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕುಂದಾಪುರ ಪ್ರಸ್ತಾವಿಕ ಭಾಷಣ ಮಾಡಿದರು. ಪಕ್ಷದ ಕಾರ್ಯಕರ್ತರು ಹುಸೇನ್ ಹೈಕಾಡಿ ಸ್ವಾಗತಿಸಿ, ವಂದಿಸಿದರು. ದೀಪಿಕಾ ನಿರೂಪಿಸಿದರು.
150 ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಸಾಧಕರನ್ನು ಗೌರವಿಸಲಾಯಿತು. ಅಂಗವಿಕಲರಿಗೆ ವಾಕಿಂಗ್ ಸ್ಟ್ಯಾಂಡ್ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು




