ಕಾಪು, ಮೇ 27: ಸಾರ್ವಜನಿಕರ ಆರೋಗ್ಯ ಕಾಳಜಿಯನ್ನು ಕೇಂದ್ರಬಿಂದುವಾಗಿಸಿಕೊಂಡು ಚಂದ್ರನಗರದ ಬಟರ್ ಫ್ಲೈ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾದ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಆರೋಗ್ಯ ತಪಾಸಣೆ ಜೊತೆಗೆ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಶಿಬಿರಕ್ಕೆ ಸ್ಥಳೀಯರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಘಟಕ ಉಡುಪಿ, ಶಿರ್ವ ಸಮುದಾಯ ಆರೋಗ್ಯ ಕೇಂದ್ರ, ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಚಂದ್ರನಗರ, ಕುತ್ಯಾರು/ಕಳತ್ತೂರು ಗ್ರಾಮ ಪಂಚಾಯತ್, ಅಲಯನ್ಸ್ ಕ್ಲಬ್ ಉಡುಪಿ ರಾಯಲ್ ಹಾಗೂ ರೋಟರಿ ಕ್ಲಬ್ ಶಿರ್ವ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಕರೂ ಆಗಿರುವ ಬಟರ್ ಫ್ಲೈ ಪಾರ್ಟಿ ಹಾಲ್ ಮಾಲಕರಾದ ಡಾ. ಫಾರೂಕ್ ಚಂದ್ರನಗರ ವಹಿಸಿದ್ದರು. ಬಳಿಕ ಮಾತನಾಡಿದ ಅವರು, “ಆರೋಗ್ಯವೇ ನಿಜವಾದ ಸಂಪತ್ತು. ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ಸೇವೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯಕ. ಆರೋಗ್ಯ ಇಲಾಖೆಯೊಂದಿಗೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ ಜನಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ” ಎಂದು ಅಭಿಪ್ರಾಯಪಟ್ಟರು.
ಶಿಬಿರವನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ದಂತ ಆರೋಗ್ಯಾಧಿಕಾರಿ ಡಾ. ಗಾಯತ್ರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲ್ಲುಗಳ ಆರೈಕೆ, ದಂತ ಶುಚಿತ್ವ ಹಾಗೂ ಮಕ್ಕಳಲ್ಲಿ ದಂತ ಆರೋಗ್ಯ ಕಾಪಾಡುವ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಇದೇ ವೇಳೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಐ.ಸಿ.ಟಿ.ಸಿ ಆಪ್ತ ಸಮಾಲೋಚಕಿ ಶ್ರೀಮತಿ ವಸಂತಿ “ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ” ಕುರಿತು ಜನರಿಗೆ ಜಾಗೃತಿ ಮೂಡಿಸಿದರು.
ಶಿಬಿರದಲ್ಲಿ ಉಚಿತ ನೇತ್ರ ತಪಾಸಣೆ, ಮಧುಮೇಹ ಪರೀಕ್ಷೆ, ರಕ್ತದೊತ್ತಡ ತಪಾಸಣೆ, ದಂತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆ ಪತ್ತೆ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ನೀಡಲಾಯಿತು. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಸಾರ್ವಜನಿಕರಿಗೆ ಆರೋಗ್ಯ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕುತ್ಯಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ದಿವಾಕರ ಬಿ. ಶೆಟ್ಟಿ, ಸಮಾಜ ಸೇವಕರಾದ ದಿವಾಕರ ಡಿ. ಶೆಟ್ಟಿ, ಸೌರ್ಯ ಟ್ರಸ್ಟ್ ವ್ಯವಸ್ಥಾಪಕ ಸುಭ್ರಮಣ್ಯ, ನೇತ್ರಾಧಿಕಾರಿ ರಕ್ಷಿತಾ, ರೋಟರಿ ಕ್ಲಬ್ ಸದಸ್ಯ ವಿಠ್ಠಲ್ ನಾಯ್ಕ್, ಎನ್.ಎನ್.ಓ ಜಿಲ್ಲಾ ಉಪಾಧ್ಯಕ್ಷ ಯು.ಎ. ರಶೀದ್, ಸಮಾಜ ಸೇವಕರಾದ ಡಾ. ಶೇಖ್ ವಹಿದ್, ಶಂಶುದ್ದಿನ್ ಕರಂದಾಡಿ, ಎಸ್.ಎ. ರಝಕ್ ಚಂದ್ರನಗರ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ ನಾಯಕ್ ನಿರೂಪಿಸಿದರು.

