ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 59ನೇ ಜೆಪ್ಪು ವಾರ್ಡಿನ ಸೂಟರ್ಪೇಟೆ 4ನೇ ಅಡ್ಡರಸ್ತೆ ಹಾಗೂ ಕನಕರಬೆಟ್ಟು ಪ್ರದೇಶದಲ್ಲಿ ಕುಸಿದ ತಡೆಗೋಡೆಯ ಪುನರ್ನಿರ್ಮಾಣ ಕಾಮಗಾರಿಗೆ ₹20 ಲಕ್ಷ ಅನುದಾನದಲ್ಲಿ ಚಾಲನೆ ನೀಡಲಾಗಿದ್ದು, ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು.
ಭೂಮಿ ಪೂಜೆಯ ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕಳೆದ ಮಳೆಗಾಲದ ವೇಳೆ ಈ ಭಾಗದ ಹಲವು ರಾಜಕಾಲುವೆಗಳು ಹಾನಿಗೊಳಗಾಗಿದ್ದು, ಕೆಲವು ಕಾಲುವೆಗಳು ಕೆಳಮಟ್ಟದಲ್ಲಿರುವುದರಿಂದ ಮಳೆ ನೀರಿನ ಹರಿವು ಸಮಸ್ಯೆಯಾಗುತ್ತಿದೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳಿಂದ ಕ್ಷೇತ್ರಕ್ಕೆ ₹300 ರಿಂದ ₹400 ಕೋಟಿಗೂ ಅಧಿಕ ಹಾನಿಯಾಗಿದ್ದರೂ, ರಾಜ್ಯ ಸರ್ಕಾರದಿಂದ ಅಗತ್ಯ ಪ್ರಮಾಣದ ಪರಿಹಾರ ಸಿಗದಿರುವುದು ವಿಷಾದನೀಯ ಎಂದರು.
ಇತ್ತೀಚೆಗೆ ರಾಜ್ಯ ಸರ್ಕಾರ ವಿವಿಧ ಜಿಲ್ಲೆಗಳಿಗೆ ಮಳೆ ಪರಿಹಾರ ನಿಧಿ ಬಿಡುಗಡೆ ಮಾಡಿದ್ದು, ಅದರಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರ ಹೆಸರಿನಲ್ಲಿ ₹10 ಕೋಟಿ ಅನುದಾನ ಮಂಜೂರಾಗಿದೆ. ಅದರ ಭಾಗವಾಗಿ ಜೆಪ್ಪು ವಾರ್ಡಿನ ಈ ತುರ್ತು ತಡೆಗೋಡೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಭರತ್ ಕುಮಾರ್, ಅಜಿತ್ ಡಿಸಿಲ್ವ, ಶಬರೀಶ್, ಪ್ರವೀಣ್ ನಿಡ್ಡೆಲ್, ಹರೀಶ್ ಸೇರಿದಂತೆ ಜೆಪ್ಪು ವಾರ್ಡಿನ ಬಿಜೆಪಿ ಕಾರ್ಯಕರ್ತರು ಹಾಗೂ ಸೂಟರ್ಪೇಟೆ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.

