ಹರಿರಾಮ್ ಶಂಕರ್ ನೇತೃತ್ವದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರ ಮನೆಗಳ ಸುರಕ್ಷತೆಗಾಗಿ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” (LHBS) ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ.
ಕೆಲಸ, ಪ್ರವಾಸ ಅಥವಾ ಇತರೆ ಕಾರಣಗಳಿಂದ ಎರಡು-ಮೂರು ದಿನಗಳಿಗಿಂತ ಹೆಚ್ಚು ಕಾಲ ಮನೆಗೆ ಬೀಗ ಹಾಕಿ ಹೊರಗಡೆ ತೆರಳುವ ನಾಗರಿಕರು ಈ ಸೌಲಭ್ಯದ ಪ್ರಯೋಜನ ಪಡೆಯಬಹುದು. ಮನೆಗೆ ಬೀಗ ಹಾಕಿ ಹೋಗುವ ಮುನ್ನ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರೆ, ಸಂಬಂಧಪಟ್ಟ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಮನೆ ಮೇಲೆ ಹಗಲು-ರಾತ್ರಿ ವಿಶೇಷ ನಿಗಾ ವಹಿಸಲಿದ್ದಾರೆ.
ಈ ಯೋಜನೆಯಡಿ ಮನೆ ಮಾಲೀಕರು ತಮ್ಮ ಪ್ರಯಾಣದ ದಿನಾಂಕ, ವಾಪಸ್ಸು ಬರುವ ದಿನ, ಸಂಪೂರ್ಣ ವಿಳಾಸ ಹಾಗೂ ಮನೆಯ ಮುಂದೆ ತೆಗೆದ ಸೆಲ್ಫಿ ಫೋಟೋವನ್ನು ಪೊಲೀಸರಿಗೆ ಕಳುಹಿಸಬೇಕಾಗುತ್ತದೆ. ಬಳಿಕ ಕಂಟ್ರೋಲ್ ರೂಂ ಮೂಲಕ ಮಾಹಿತಿ ಸಂಬಂಧಿತ ಠಾಣೆಗೆ ರವಾನೆಯಾಗಿದ್ದು, ಭದ್ರತಾ ಮೇಲ್ವಿಚಾರಣೆಗೆ ಬೀಟ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಸಾರ್ವಜನಿಕರು ಈ ಸೇವೆಯನ್ನು ಪಡೆಯಲು ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 0820-2526709 ಅನ್ನು ಸಂಪರ್ಕಿಸಬಹುದು.
ಇದೇ ವೇಳೆ, ಈ ಯೋಜನೆ ವೈಯಕ್ತಿಕ ಮನೆಗಳಿಗೆ ಮಾತ್ರ ಅನ್ವಯವಾಗಿದ್ದು, ಅಪಾರ್ಟ್ಮೆಂಟ್ ಹಾಗೂ ಬಹುಮಹಡಿ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ ಎಂದು ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ. ಮನೆಗೆ ಸಂಬಂಧಿಸಿದ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಅವರು ಮನವಿ ಮಾಡಿದ್ದಾರೆ.






