ಉಡುಪಿ: ನಗರದ ಹೃದಯ ಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣದ ಸಮೀಪದ ಖಾದರ್ ಬಿಲ್ಡಿಂಗ್ನಲ್ಲಿ ಭಾನುವಾರ ಸಂಭವಿಸಿದ ಭಾರೀ ಅಗ್ನಿ ಅವಘಡವು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಧ್ಯಾಹ್ನದ ವೇಳೆ ಏಕಾಏಕಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಉಗ್ರ ಸ್ವರೂಪ ಪಡೆದುಕೊಂಡು ಕಟ್ಟಡದೊಳಗಿನ ಅಂಗಡಿಗಳನ್ನೆಲ್ಲ ಆವರಿಸಿತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಐದಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿದ್ದು, ಕೆಲವು ಮಳಿಗೆಗಳಲ್ಲಿ ಸಂಗ್ರಹಿಸಿದ್ದ ವಸ್ತುಗಳು, ದಾಖಲೆಗಳು ಹಾಗೂ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ತೀವ್ರತೆ ಹೆಚ್ಚಿದಂತೆ ಪಕ್ಕದ ಅಂಗಡಿಗಳಿಗೊ ಸಹ ಬೆಂಕಿ ಹಬ್ಬಿ, ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಬೆಂಕಿ ಆರಿಸಲು ಪ್ರಯತ್ನಿಸಿದರೂ, ಬೆಂಕಿಯ ಉಗ್ರತೆ ಮತ್ತು ಹೊಗೆ ಹೆಚ್ಚಿದ್ದರಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕೆಲವರು ನೀರು ಮತ್ತು ಲಭ್ಯವಿದ್ದ ಸಾಧನಗಳನ್ನು ಬಳಸಿ ಬೆಂಕಿ ನಂದಿಸಲು ಯತ್ನಿಸಿದರೂ, ಪ್ರಯತ್ನಗಳು ಫಲಕಾರಿಯಾಗಲಿಲ್ಲ.
ಇದೇ ವೇಳೆ, ಅಗ್ನಿಶಾಮಕ ದಳ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಡವಾದ ಕಾರಣದಿಂದ ಬೆಂಕಿ ಇನ್ನಷ್ಟು ಅಂಗಡಿಗಳಿಗೆ ವ್ಯಾಪಿಸಿದಂತಾಗಿದೆ ಎಂಬ ಆರೋಪ ಕೇಳಿಬಂದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ತೊಡಗಿದ್ದಾರೆ.
ಘಟನೆಯಿಂದಾಗಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಭದ್ರತಾ ದೃಷ್ಟಿಯಿಂದ ಜನರನ್ನು ದೂರ ಸರಿಸಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಅಧಿಕೃತ ದೃಢೀಕರಣ ಇನ್ನಷ್ಟೇ ಬಾಕಿಯಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ಸಮೀಪದಿಂದಲೇ ಗಮನಿಸುತ್ತಿದ್ದಾರೆ.

