ಮಂಗಳೂರು: ಕರಾವಳಿ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಹೊಸ ಮನರಂಜನಾ ಪ್ಯಾಕೇಜ್ ಸಿದ್ಧವಾಗಿದೆ. ಜಯಂತಿ ಪ್ರೊಡಕ್ಷನ್ ಲಾಂಛನದಲ್ಲಿ, ಡಿ.ಎಸ್ ಎಂಟರ್ಟೈನೆಂಟ್ಸ್ ಹಾಗೂ ಅಪ್ಸರಾ ಎಂಟರ್ಟೈನೆಂಟ್ಸ್ ಸಹಭಾಗಿತ್ವದಲ್ಲಿ ತಯಾರಾದ ತುಳು ಚಲನಚಿತ್ರ “ದೇವ್ ದಾಸ್ ನ ಲೀಲಾ” ಇದೇ ಏಪ್ರಿಲ್ 24ರಂದು ಕರಾವಳಿಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ತೇಜೇಶ್ ಪೂಜಾರಿ, ತಮ್ಮ ಹಿಂದಿನ ಯಶಸ್ವಿ ತುಳು ಚಿತ್ರ “ಯಶಸ್ವಿ ತುಡರ್” ನಂತರ ಮತ್ತೊಂದು ವಿಭಿನ್ನ ಕಥಾಹಂದರದೊಂದಿಗೆ ಈ ಚಿತ್ರವನ್ನು ಪ್ರೇಕ್ಷಕರ ಮುಂದಿಡುತ್ತಿರುವುದಾಗಿ ತಿಳಿಸಿದರು. ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಮತ್ತು ಟ್ರೇಲರ್ ಜಯಂತಿ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ ಎಂದರು.
ಚಿತ್ರದಲ್ಲಿ ಎಲ್ಟನ್ ಜೆಫ್ ನಾಯಕನಾಗಿ, ಅದ್ವಿತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದು, ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಸಂಪೂರ್ಣ ಮನರಂಜನಾ ಚಿತ್ರವಾಗಿರಲಿದೆ ಎಂಬ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸಿದರು.
ಸುಮಾರು 35 ದಿನಗಳ ಕಾಲ ಮಂಗಳೂರು, ಮುಡಿಪು, ಬಜ್ಜೆ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ಬಾಲಿವುಡ್ ಖ್ಯಾತ ಗಾಯಕ ಶಾನ್ ಮೊದಲ ಬಾರಿಗೆ ತುಳು ಚಿತ್ರಕ್ಕಾಗಿ ಧ್ವನಿ ನೀಡಿದ್ದಾರೆ. ಜೊತೆಗೆ ದಿವ್ಯ ಕುಮಾರ್, ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ ಹಾಗೂ ಪ್ರಕಾಶ್ ಮಹಾದೇವನ್ ಅವರ ಗಾಯನವೂ ಚಿತ್ರಕ್ಕೆ ಇನ್ನಷ್ಟು ಮೆರಗು ತಂದಿದೆ.
ಚಿತ್ರದ ತಾಂತ್ರಿಕ ಬಳಗದಲ್ಲಿ ಛಾಯಾಗ್ರಾಹಕರಾಗಿ ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನಕಾರರಾಗಿ ಗಣೇಶ್ ನಿರ್ಚಲ್, ಸಂಗೀತ ನಿರ್ದೇಶಕರಾಗಿ ಸಾಯಿಷ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪಿರೇರಾ ಕಾರ್ಯನಿರ್ವಹಿಸಿದ್ದಾರೆ.
ತಾರಾಗಣದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಅನೂಪ್ ಸಾಗರ್, ಅನುಷಾ ರಾಜ್, ವಿನಾಯಕ್ ಜಪ್ಪು, ಶೈಲಶ್ರೀ ಮುಲ್ಕಿ, ರಾಧೇಶ್ ಶೆಣೈ, ತಿಮ್ಮಪ್ಪ ಕುಲಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಶೈಲಶ್ರೀ, ಅನೂಪ್ ಸಾಗರ್ ಹಾಗೂ ನಿರ್ಮಾಪಕ ದೀಪಕ್ ಸಿಂಗ್ ಉಪಸ್ಥಿತರಿದ್ದರು.
— ತುಳು ಚಿತ್ರರಂಗಕ್ಕೆ ಮತ್ತೊಂದು ಭರವಸೆಯ ಪ್ರಯತ್ನ, “ದೇವ್ ದಾಸ್ ನ ಲೀಲಾ” ಮೇಲೆ ಪ್ರೇಕ್ಷಕರ ಕಣ್ಣಿದೆ.

