ಯಾದಗಿರಿ: ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಬೀದರ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಖಾಸಗಿ ಸ್ಲೀಪರ್ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ನಂತರ ಉಂಟಾದ ಭಾರೀ ಬೆಂಕಿಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.
ಲಿಂಗಸುಗೂರಿನಿಂದ ಕಲಬುರಗಿ ಕಡೆಗೆ ಸಾಗುತ್ತಿದ್ದ ಸ್ಲೀಪರ್ ಬಸ್ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತಕ್ಷಣವೇ ಎರಡೂ ವಾಹನಗಳಿಗೆ ಬೆಂಕಿ ತಗುಲಿ, ಕೆಲವೇ ಕ್ಷಣಗಳಲ್ಲಿ ಅವು ಜ್ವಾಲಾಮುಖಿಯಾಗಿ ಹೊತ್ತಿ ಉರಿದವು. ಬೆಂಕಿಯ ತೀವ್ರತೆಗೆ ಕಾರಿನಲ್ಲಿದ್ದವರು ಹೊರಬರಲು ಸಾಧ್ಯವಾಗದೆ ಒಳಗಡೆಯೇ ಸಿಲುಕಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳು ಸಂಪೂರ್ಣವಾಗಿ ಕರಕಲಾಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದೆಡೆ, ಬಸ್ಗೆ ಬೆಂಕಿ ತಗುಲುತ್ತಿದ್ದಂತೆಯೇ ಎಚ್ಚೆತ್ತ ಪ್ರಯಾಣಿಕರು ತುರ್ತು ದ್ವಾರ ಹಾಗೂ ಕಿಟಕಿಗಳ ಮೂಲಕ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿದಿದೆ.
ಹೈಲೈಟ್ಸ್:
- ಮುಖಾಮುಖಿ ಡಿಕ್ಕಿ ಬಳಿಕ ಬೆಂಕಿ ಅವಘಡ
- ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲಿಯೇ ಸಜೀವ ದಹನ
- ಅಪಘಾತದಲ್ಲಿ ಮ್ರತರ ಸಂಖ್ಯೆ 9 ಕ್ಕೆ ಏರಿಕೆ
- ಬಸ್ ಪ್ರಯಾಣಿಕರು ತುರ್ತು ದ್ವಾರಗಳಿಂದ ಪಾರು
- ಇಬ್ಬರೂ ವಾಹನಗಳು ಸಂಪೂರ್ಣ ಸುಟ್ಟು ಭಸ್ಮ
ಇನ್ನಷ್ಟು ವಿವರಗಳು ತನಿಖೆಯ ಬಳಿಕ ಲಭ್ಯವಾಗಲಿವೆ.





