ಬೆಂಗಳೂರು: ಜನತಾದಳ ಜಾತ್ಯತೀತ ಪಕ್ಷದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಹಾಗೂ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಅತ್ಯಂತ ಗೌರವಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇಶದ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಆದರ್ಶಗಳನ್ನು ಸ್ಮರಿಸಿ, ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು. ಮಾಜಿ ಉಪ ಪ್ರಧಾನಿಗಳು ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನ್ ರಾಮ್ ಅವರಿಗೆ ಎಚ್ ಡಿ ಕುಮಾರ ಸ್ವಾಮಿ ಪುಷ್ಪರ್ಚಣೆ ಗೈದು ನಮನಗಳನ್ನು ಸಮರ್ಪಿಸಿದರು

ಕಾರ್ಯಕ್ರಮದ ಅಂಗವಾಗಿ ಜಗಜೀವನ್ ರಾಮ್ ಅವರಿಗೂ ನಮನಗಳನ್ನು ಸಲ್ಲಿಸಲಾಯಿತು. ಹಸಿರು ಕ್ರಾಂತಿಯ ಹರಿಕಾರರಾಗಿಯೂ, ದೇಶದ ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲು ಶ್ರಮಿಸಿದ ಅವರ ಸೇವೆಯನ್ನು ಈ ವೇಳೆ ಕೊಂಡಾಡಲಾಯಿತು.

ಕಾರ್ಯಕ್ರಮದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಎಂ. ಕೃಷ್ಣಾರೆಡ್ಡಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಸಂವಿಧಾನಿಕ ಮೌಲ್ಯಗಳು ಮತ್ತು ಸಮಾನತೆಯ ತತ್ವಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಹೇಳಿದರು. ಸಮಾಜದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರ ಹೋರಾಟ ಸದಾಕಾಲ ಸ್ಮರಣೀಯವಾಗಿರುತ್ತದೆ ಎಂದರು.

ಮಾಜಿ ಮಂತ್ರಿಗಳಾದ ಶ್ರೀ ವೆಂಕಟರಾವ್ ನಾಡಗೌಡರು ಮಾತನಾಡಿ, ಡಾ. ಜಗಜೀವನ್ ರಾಮ್ ಅವರ ಸಾರ್ವಜನಿಕ ಜೀವನದ ಸರಳತೆ ಮತ್ತು ಸೇವಾಭಾವ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಡಾ. ಕೆ. ಅನ್ನದಾನಿ ಅವರು, ಡಾ. ಅಂಬೇಡ್ಕರ್ ಅವರು ನೀಡಿದ ಸಾಮಾಜಿಕ ನ್ಯಾಯದ ದಿಕ್ಕು ಸೂಚನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಎಂ ಕೃಷ್ಣಾರೆಡ್ಡಿ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಶ್ರೀ ವೆಂಕಟರಾವ್ ನಾಡಗೌಡ, ಪಕ್ಷದ ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಡಾ. ಕೆ ಅನ್ನದಾನಿ, ಶಾಸಕರುಗಳಾದ ಶ್ರೀ ಟಿಎನ್ ಜವರಾಯಗೌಡ, ಡಾ. ಟಿ ಎ ಶರವಣ,..ಮಾಜಿ ಶಾಸಕರಾದ ಶ್ರೀ ಕೆ ಎ ತಿಪ್ಪೇಸ್ವಾಮಿ, ಮಾಜಿ ಶಾಸಕರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಇ.ಕೃಷ್ಣಪ್ಪ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರಾದ ಶ್ರೀ ಆರ್ ಪ್ರಕಾಶ್, ಬೆಂಗಳೂರು ಪಶ್ಚಿಮ ಜಿಲ್ಲಾ ಅಧ್ಯಕ್ಷರಾದ ಶ್ರೀ ಟಿ ತಿಮ್ಮೇಗೌಡ, ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷರಾದ ಶ್ರೀ ನಟರಾಜ ಗಂಗಾಧರ್,ಗ್ರೇಟರ್ ಬೆಂಗಳೂರು ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಶ್ರೀ ಜಿ ವೇಲು, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶೈಲಾ ಸಂತೋಜಿ ರಾವ್, ನಗರ ಕಾರ್ಯಾಧ್ಯಕ್ಷರಾದ ಶ್ರೀ ಟಿ ಆರ್ ತುಳಸಿರಾಮ್, ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್ ರಮೇಶ್, ಯುವ ವಿಭಾಗದ ಅಧ್ಯಕ್ಷರಾದ ಶ್ರೀ ಆರ್ ಸ್ಯಾಮುಯೆಲ್,ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ಹಾಗೂ ಪರಿಶಿಷ್ಟ ಜಾತಿ ವಿಭಾಗದ ನೂರಾರು ಕಾರ್ಯಕರ್ತರು ಸೇರಿದಂತೆ ಅನೇಕ ಪ್ರಮುಖ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ, ಮಹನೀಯರಿಗೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮವು ಶಾಂತಿಯುತ ಹಾಗೂ ಗೌರವಪೂರ್ಣ ವಾತಾವರಣದಲ್ಲಿ ನೆರವೇರಿದ್ದು, ಪಕ್ಷದ ಸದಸ್ಯರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಸಹೋದರತ್ವವನ್ನು ಬಲಪಡಿಸುವ ಸಂಕಲ್ಪದೊಂದಿಗೆ ಮುಂದುವರಿಯಲು ತೀರ್ಮಾನಿಸಿದರು.





