ಹೆಬ್ರಿ: ರಸ್ತೆ ದಾಟುವ ವೇಳೆ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿ, ಮತ್ತೊಬ್ಬ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಉಡುಪಿ ತಾಲೂಕಿನ ಹೆಬ್ರಿಯಲ್ಲಿ ಶುಕ್ರವಾರ ಸಂಭವಿಸಿದೆ.
ಪೆರ್ಡೂರು ಭಾಗದಿಂದ ಖಾಸಗಿ ಬಸ್ಸಿನಲ್ಲಿ ಬಂದು ಹೆಬ್ರಿ ಕಡೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರಾದ ಪ್ರೀತಿ (21) ಮತ್ತು ಅಪರ್ಣಾ ರಸ್ತೆ ದಾಟಲು ಇಳಿದಾಗ, ಉಡುಪಿ ಕಡೆಯಿಂದ ರಾಂಗ್ ಸೈಡ್ನಲ್ಲಿ ಅತೀವೇಗವಾಗಿ ಬಂದ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ರಸ್ತೆ ಮೇಲೆ ಬಿದ್ದು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಪ್ರೀತಿಯನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅವರು ಸಾವನ್ನಪ್ಪಿದ್ದಾರೆ. ಅಪರ್ಣಾ ಅವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಪ್ರೀತಿ ಅವರು ಪೆರ್ಡೂರು ಪೇಟೆಯ ಶ್ರೀಧರ ಆಚಾರ್ಯ ಅವರ ಏಕೈಕ ಪುತ್ರಿಯಾಗಿದ್ದು, ಪದವಿ ಶಿಕ್ಷಣ ಪೂರ್ಣಗೊಳಿಸಿ ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿದ್ದರು. ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದರು.
ಘಟನೆ ಕನ್ಯಾನದ ತಿಮ್ಮಪ್ಪ ನಾಯಕ್ ಶಾಲೆಯ ಸಮೀಪ ನಡೆದಿದೆ. ವಾಹನ ಚಾಲಕ ನಾರಾಯಣಪ್ಪ ಅವರ ಅತಿವೇಗ ಮತ್ತು ಅಜಾಗರೂಕ ಚಾಲನೆ ಇದಕ್ಕೆ ಕಾರಣವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಆರೋಪ
ಘಟನೆಗೆ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ಹೆಬ್ರಿ–ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕನ್ಯಾನದ ಬಳಿ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಮುನ್ಸೂಚನಾ ಫಲಕಗಳಿಲ್ಲದೆ ಬದಲಿ ಸಂಚಾರಕ್ಕೆ ಅವಕಾಶ ನೀಡಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಈ ಅಪಘಾತ ಸೇರಿ ಇದೇ ಸ್ಥಳದಲ್ಲಿ ಐದು ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು.
ಪರಿಹಾರಕ್ಕೆ ಒತ್ತಾಯ
ಮೃತ ಯುವತಿಯ ಕುಟುಂಬ ಹಾಗೂ ಗಾಯಾಳು ವಿದ್ಯಾರ್ಥಿನಿಯ ಕುಟುಂಬಕ್ಕೆ ₹50 ಲಕ್ಷಕ್ಕೂ ಅಧಿಕ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಹೆಬ್ರಿ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಸಾಮಾಜಿಕ ಹೋರಾಟಗಾರರಾದ ಶ್ರೀಕಾಂತ್ ಪೂಜಾರಿ ಕುಚ್ಚೂರು, ಶಿವಪ್ರಸಾದ್ ಶೆಟ್ಟಿ, ಕೃಷ್ಣಮೂರ್ತಿ ಭಂಡಾರಿ, ಸೀತಾನದಿ ವಿಜೇಂದ್ರ ಶೆಟ್ಟಿ, ಈಶ್ವರ ಬೇಳಂಜೆ ಹಾಗೂ ರಿಕ್ಷಾ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.







