ಮಂಗಳೂರು: ಪ್ರೀತಿಯ ಸಂಬಂಧದಲ್ಲಿ ಉಂಟಾದ ಮನಸ್ತಾಪ ಹಾಗೂ ಮಾನಸಿಕ ಕಿರುಕುಳದ ಹಿನ್ನೆಲೆ 22 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮೂಡುಸೆಡ್ಡೆ ಎದುರುಪದವು ನಿವಾಸಿ ಮುಹಮ್ಮದ್ ಆಶಿಕ್ (22) ಮಾರ್ಚ್ 21ರಂದು ಮದ್ಯಪಾನ ಮಾಡಿ ತನ್ನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆರಂಭದಲ್ಲಿ ಸಾವಿನ ನಿಖರ ಕಾರಣ ಸ್ಪಷ್ಟವಾಗಿರಲಿಲ್ಲ. ಆದರೆ ನಂತರ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ, ಆಶಿಕ್ ಹಲವು ಮಹಿಳೆಯರೊಂದಿಗೆ ಸಂವಹನ ನಡೆಸಿರುವುದು ಹಾಗೂ ವೈಯಕ್ತಿಕ ವಿಷಯಗಳು ಹೊರಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆಶಿಕ್ ಕೂಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ, ಅದೇ ಕಾಲೇಜಿನ ಉಳಿಯಾಲ ನಿವಾಸಿ ಸಮೀಯಾ ಸಬಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ನಡುವೆ ಆಪ್ತ ಸಂಬಂಧವಿದ್ದರೂ, ಇತ್ತೀಚಿನ ದಿನಗಳಲ್ಲಿ ಯುವತಿ ದೂರವಾಗಿದ್ದು, ಇದರಿಂದ ಆಶಿಕ್ ಮಾನಸಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಮೃತನ ತಂದೆ ಮುಹಮ್ಮದ್ ಹನೀಫ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ನೀನು ಎಲ್ಲಿಯಾದರೂ ಹೋಗಿ ಸಾಯಿ” ಎಂದು ಹೇಳುವುದು ಸೇರಿದಂತೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆ ಸಂಭವಿಸಿದ ಸಂದರ್ಭದಲ್ಲೂ ಯುವತಿ ವೀಡಿಯೋ ಕಾಲ್ನಲ್ಲಿ ಇದ್ದಳು ಎಂಬ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮೊಬೈಲ್ ಚಾಟ್ಗಳು ಹಾಗೂ ವೀಡಿಯೋ ಕಾಲ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

