ಕೊಡಗು ಮಡಿಕೇರಿ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಅಧಿಕಾರಿಗಳ ದೂರು ಅರ್ಜಿ ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒಟ್ಟು 6 ಅರ್ಜಿಗಳು ಸಲ್ಲಿಕೆಯಾಗಿದ್ದು, ವಿವಿಧ ಇಲಾಖೆಗಳ ಸಮಸ್ಯೆಗಳು ಬೆಳಕಿಗೆ ಬಂದವು.
ಕಂದಾಯ, ಅರಣ್ಯ ಹಾಗೂ ಭೂ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಾಗರಿಕರು ತಮ್ಮ ಅಹವಾಲುಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಪೊಲೀಸ್ ಉಪ ಅಧೀಕ್ಷಕರಾದ ದಿನಕರ ಶೆಟ್ಟಿ ಅವರು, ಸಲ್ಲಿಕೆಯಾದ ಎಲ್ಲಾ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗೆ ಇತ್ಯರ್ಥಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ನೌಕರರು ಸಮರ್ಪಕವಾಗಿ ಸ್ಪಂದಿಸಬೇಕು. ಯಾವುದಾದರೂ ಕೆಲಸ ತಕ್ಷಣ ನೆರವೇರಿಸಲು ಸಾಧ್ಯವಾಗದಿದ್ದರೆ, ಅದರ ಕುರಿತು ಸ್ಪಷ್ಟವಾದ ಹಿಂಬರಹ (written reply) ನೀಡಬೇಕು ಎಂದು ಅವರು ನಿರ್ದೇಶಿಸಿದರು.

ಸರ್ಕಾರಿ ಕೆಲಸವೆಂದರೆ ಅದು ಜನರ ಕೆಲಸ ಎಂಬ ಅರಿವಿನಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಕಡತಗಳನ್ನು ಅನಗತ್ಯವಾಗಿ ವಿಳಂಬಗೊಳಿಸಬಾರದು ಎಂದು ಎಚ್ಚರಿಸಿದರು. ಕೆಲವು ಮನವಿಗಳು ಒಂದು ಅಥವಾ ಎರಡು ವರ್ಷಗಳಾದರೂ ಬಗೆಹರಿಯದೇ ಇರುವುದನ್ನು ಪ್ರಶ್ನಿಸಿದ ಅವರು, ಇಂತಹ ನಿರ್ಲಕ್ಷ್ಯಕ್ಕೆ ಅವಕಾಶ ಇರಬಾರದು ಎಂದರು.
ಇನ್ನು ಸರ್ಕಾರಿ ನೌಕರರು ಕಚೇರಿಯಲ್ಲಿ ಗುರುತಿನ ಚೀಟಿ ಧರಿಸಬೇಕು. ಪ್ರತಿದಿನದ ಚಲನವಲನವನ್ನು ದಾಖಲಿಸುವ ವಹಿಯನ್ನು ನಿರ್ವಹಿಸಬೇಕು. ರಜೆ ಅಥವಾ ಕಚೇರಿಯಿಂದ ಹೊರ ಹೋಗುವ ಸಂದರ್ಭಗಳಲ್ಲಿ ಸಂಬಂಧಪಟ್ಟ ದಾಖಲೆ ಇರಬೇಕು. ತಮ್ಮ ಪರವಾಗಿ ಸಭೆಗಳಿಗೆ ಹಾಜರಾಗುವವರಿಗೂ ಅಧಿಕೃತ ನಿಯೋಜನೆ ಪತ್ರ ಇರಬೇಕು ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರು ಸಲ್ಲಿಸಿದ ದೂರುಗಳಿಗೆ 15 ದಿನಗಳ ಒಳಗೆ ಸ್ಪಂದನೆ ಸಿಗದಿದ್ದಲ್ಲಿ, ದೂರವಾಣಿ ಮೂಲಕ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ವೀಣಾ, ತಹಶೀಲ್ದಾರ್ ಶ್ರೀಧರ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

