ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯಾಭಿಮಾನಿಗಳಿಗೆ ಇಂದು ಒಂದು ಸ್ಮರಣೀಯ ಕ್ಷಣ ಸಾಕ್ಷಿಯಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾದ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಭವ್ಯವಾಗಿ ನಡೆಯಿತು. ಈ ಸಂದರ್ಭದಲ್ಲಿ ಸಾಹಿತ್ಯ, ಶಿಕ್ಷಣ ಮತ್ತು ಸಮಾಜಮುಖಿ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ ಡಾ. ಇ.ಕೆ.ಎ ಸಿದ್ದೀಕ್ ಅಡ್ಡೂರು ಅವರಿಗೆ ಪ್ರತಿಷ್ಠಿತ “ಕನ್ನಡ ಸಿರಿ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಡಾ. ಸಿದ್ದೀಕ್ ಅಡ್ಡೂರು ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ನೀಡಿದ ಕೊಡುಗೆ, ವಿಶೇಷವಾಗಿ ಗ್ರಾಮೀಣ ಮಟ್ಟದಲ್ಲಿ ಕನ್ನಡದ ಪ್ರಚಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ಅವರ ಸಾಹಿತ್ಯ ಸೇವೆ ಮತ್ತು ಸಮಾಜದ ಮೇಲಿನ ಬದ್ಧತೆ ಇತರರಿಗೆ ಪ್ರೇರಣೆಯಾಗಲಿದೆ

ಡಾ. ಸಿದ್ದೀಕ್ ಅಡ್ಡೂರು ಅವರು ತುಳುನಾಡ ಸೂರ್ಯ ಪತ್ರಿಕೆ ಯಜೊತೆ ಮಾತಾಡುತ್ತಾ , “ಈ ಗೌರವ ನನ್ನ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಕನ್ನಡವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಸಲ್ಲುತ್ತದೆ” ಎಂದು ಹೇಳಿ, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಇನ್ನಷ್ಟು ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಯುವ ಸಾಹಿತ್ಯಕರ್ತರಿಗೆ ವೇದಿಕೆ ಕಲ್ಪಿಸುವ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.
ಈ ಸಮ್ಮೇಳನವು ಕನ್ನಡ ಸಾಹಿತ್ಯದ ಪ್ರಚಾರ-ಪ್ರಸಾರಕ್ಕೆ ಮತ್ತೊಂದು ಮೈಲುಗಲ್ಲಾಗಿ ಉಳಿದು, ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಿತು.






