ಕೋಟೆಕಾರು, ಉಳ್ಳಾಲ: ಕೋಟೆಕಾರು ಪ್ರದೇಶದಲ್ಲಿರುವ Bombay Saw Mill ಕಾರ್ಖಾನೆಯಿಂದ ಉಂಟಾಗಿರುವ ಗಂಭೀರ ವಾಯು ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ, ಈ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಸಂಘಟನಾ ಕಾರ್ಯದರ್ಶಿಯವರು ತೀವ್ರವಾಗಿ ಒತ್ತಾಯಿಸಿದ್ದಾರೆ.
ಸ್ಥಳೀಯ ನಿವಾಸಿಗಳಿಂದ ನಿರಂತರವಾಗಿ ಬಂದ ದೂರುಗಳ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಕಾರ್ಖಾನೆ ಅಗತ್ಯ ಲೈಸೆನ್ಸ್ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದು ತಾತ್ಕಾಲಿಕ ಕ್ರಮಕ್ಕೆ ಸೀಮಿತವಾಗದೆ, ಶಾಶ್ವತ ಪರಿಹಾರ ಒದಗಿಸಬೇಕು ಎಂದು ನಮ್ಮ ಆಗ್ರಹವಾಗಿದೆ.

ಈ ಕಾರ್ಖಾನೆಯಿಂದ ಹೊರಬರುತ್ತಿರುವ ದಟ್ಟ ಹೊಗೆ ಸುತ್ತಮುತ್ತಲಿನ ವಸತಿ ಪ್ರದೇಶಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳಿರುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಣ್ಣು ಕೆರಳಿಕೆ, ಗಂಟಲು ಉರಿ, ಎದೆ ಬಿಗಿತ ಹಾಗೂ ಉಸಿರಾಟದ ತೊಂದರೆಗಳು ಸಾಮಾನ್ಯವಾಗಿವೆ. ಅಲ್ಲದೆ, ಈ ಪ್ರದೇಶದಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಬೇಕು.

ವಸತಿ ವಲಯದ ಮಧ್ಯದಲ್ಲಿ ಇಂತಹ ಮಾಲಿನ್ಯಕಾರಿ ಕೈಗಾರಿಕಾ ಘಟಕ ಕಾರ್ಯನಿರ್ವಹಿಸುವುದು ಪರಿಸರ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಕಾರ್ಖಾನೆಗೆ ನೀಡಲಾದ ಎಲ್ಲಾ ಅನುಮತಿಗಳು, Pollution NOC, emission reports ಹಾಗೂ ಪರಿಶೀಲನಾ ವರದಿಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.

ಇದೇ ವೇಳೆ, ಇಷ್ಟು ದಿನಗಳಿಂದ ಲೈಸೆನ್ಸ್ ಇಲ್ಲದೇ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದರೂ ಪರಿಸರ ಅಧಿಕಾರಿಗಳು ಗಮನಿಸದೇ ಇದ್ದಿರುವುದು ಗಂಭೀರ ನಿರ್ಲಕ್ಷ್ಯವಾಗಿದ್ದು, ಇದಕ್ಕೂ ಸಂಬಂಧಪಟ್ಟವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಅತ್ಯಂತ ಪ್ರಮುಖವಾಗಿದ್ದು, ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲಾಗುವುದಿಲ್ಲ. ಆದ್ದರಿಂದ Bombay Saw Mill ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕು ಕ್ರಮ ಜರಗಿಸಲು ವಿಳಂಬ ನೀತಿ ಅನುಸರಿಸಿದ್ದಲ್ಲಿ ತುಳುನಾಡ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ನೇತ್ರತ್ವದಲ್ಲಿ ಪ್ರತಿಭಟನಾ ಸಭೆ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತುಳುನಾಡ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಆಗ್ರಹಿಸಿದ್ದಾರೆ






