ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟದ ಮಹತ್ವದ ಸಭೆ ಸಂಘಟನೆಯ ಅಧ್ಯಕ್ಷರಾದ ಎ. ಸಿ. ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ಭವಿಷ್ಯದ ಕಾರ್ಯಯೋಜನೆಗಳು, ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು-ಬೆಳೆಸುವ ದಿಕ್ಕಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಮಧ್ಯಮ ಕಾರ್ಯದರ್ಶಿ ಕರುಣಾಕರ್ ಶೆಟ್ಟಿ ಪ್ರಮುಖವಾಗಿ ಭಾಗವಹಿಸಿ ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದಲ್ಲದೆ ಸದಸ್ಯರಾದ ಸುಧಾಕರ್ ಆಳ್ವ, ಹೇಮ ದಾಮೋದರ್ ಸುವರ್ಣ, ಜಯಂತಿ ಎಸ್. ಬಂಗೇರ, ಪ್ರಶಾಂತ್ ಭಟ್ ಕಡಬ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದು, ಸಂಘಟನೆಯ ಬಲವರ್ಧನೆಗೆ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ತುಳು ಭಾಷೆಯ ಪ್ರಚಾರ-ಪ್ರಸಾರವನ್ನು ಮತ್ತಷ್ಟು ವ್ಯಾಪಕಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಯುವಜನರನ್ನು ಸಂಘಟನೆಯೊಂದಿಗೆ ಸೇರಿಸಿ ತುಳು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.
ಅಂತಿಮವಾಗಿ ಕಾರ್ಯಕಾರಿ ಸದಸ್ಯರಾದ ಪ್ರಶಾಂತ್ ಭಟ್ ಕಡಬ ಅವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು.




