ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (27) ಮೃತಪಟ್ಟ ಘಟನೆ ರಾಜ್ಯದಾದ್ಯಂತ ದುಃಖದ ವಾತಾವರಣ ನಿರ್ಮಿಸಿದೆ.
ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ ಅವರು ಗುರುವಾರ ರಾತ್ರಿ ಸುಮಾರು 11:45ರ ವೇಳೆ ಮೃಗಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ‘ಸನ್ ಕಾನರ್’ ಹಕ್ಕಿಗೆ ಚಿಕಿತ್ಸೆ ನೀಡುವ ವೇಳೆ, ಅಲ್ಲಿದ್ದ ಗರ್ಭಿಣಿ ನೀರಾನೆಯ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷೆ ನಡೆಸಲು ನೀರಾನೆಯ ಆವರಣದೊಳಗೆ ಪ್ರವೇಶಿಸಿದ ವೇಳೆ, ಏಕಾಏಕಿ ಕೆರಳಿದ ನೀರಾನೆ ಅವರ ಮೇಲೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಶಸ್ತ್ರಚಿಕಿತ್ಸೆ ನಡೆದರೂ ಗಂಭೀರ ಗಾಯಗಳಿಂದಾಗಿ ಅವರು ಇಂದು ಮುಂಜಾನೆ 6:30ರ ಸುಮಾರಿಗೆ ನಿಧನರಾದರು.
ಇತ್ತೀಚೆಗಷ್ಟೇ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಅವರು ತರಬೇತಿ ಹಂತದಲ್ಲಿದ್ದರು ಎಂದು ತಿಳಿದುಬಂದಿದೆ.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸಿ ತಕ್ಷಣ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ, ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ SOP ಪಾಲನೆ ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ಸಲ್ಲಿಸುವಂತೆ ಹಿರಿಯ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳ ತಂಡಕ್ಕೆ ಆದೇಶಿಸಲಾಗಿದೆ.
ಈ ದುರ್ಘಟನೆ ಹಿನ್ನೆಲೆ ಮೃಗಾಲಯದ ಸುರಕ್ಷತಾ ಕ್ರಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದ್ದು, ತನಿಖಾ ವರದಿಯ ಬಳಿಕ ನಿಖರ ಕಾರಣ ಬಹಿರಂಗವಾಗುವ ನಿರೀಕ್ಷೆಯಿದೆ.

