ಮೂಡಬಿದಿರೆ: ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಹೊಸ ತಿರುವು ದೊರೆತಿದೆ. ದೂರುದಾರರಾದ ಸುಮತಿ ನಾಯ್ಕ್ ಅವರ ಅಕ್ಕ ಪ್ರಪುಲ್ಲ ನಾಯ್ಕ್ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ತಂಗಿಯ ಆರೋಪಗಳನ್ನು ತಳ್ಳಿಹಾಕಿ ಇನ್ಸ್ಪೆಕ್ಟರ್ ಪರವಾಗಿ ಮಾತನಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಪುಲ್ಲ ನಾಯ್ಕ್, “ಇದು ಸಂಪೂರ್ಣ ಕೌಟುಂಬಿಕ ಕಲಹದಿಂದ ಉಂಟಾದ ಪ್ರಕರಣ. ನನ್ನ ತಂಗಿ ಸುಮತಿ ನಾಯ್ಕ್ ಅವರು ಇನ್ಸ್ಪೆಕ್ಟರ್ ಸಂದೇಶ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕುಟುಂಬ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಇನ್ಸ್ಪೆಕ್ಟರ್ ಅವರು ಸೂಕ್ತ ಸಲಹೆ ನೀಡಿದ್ದರು. ಆದರೆ ಇದನ್ನು ತಪ್ಪಾಗಿ ಅರ್ಥೈಸಿ ದೂರು ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ಇನ್ನಷ್ಟು ವಿವರಿಸುತ್ತಾ ಅವರು, “ಈ ಹಿಂದೆ ನನ್ನ ತಂಗಿ ತನ್ನ ಗಂಡ ಮತ್ತು ಮಗನನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ದೂರು ನೀಡಿದಾಗ, ಇನ್ಸ್ಪೆಕ್ಟರ್ ನಮ್ಮ ಪರವಾಗಿ ನಡೆದುಕೊಂಡಿದ್ದರು. ಅವರು ಒಳ್ಳೆಯ ವ್ಯಕ್ತಿ. ದುರುದ್ದೇಶದಿಂದಲೇ ಈಗ ಈ ಆರೋಪ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಪ್ರಪುಲ್ಲ ನಾಯ್ಕ್ ಅವರು ತಮ್ಮ ತಂಗಿಯ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದಾರೆ. “ಇದಕ್ಕೂ ಮೊದಲು ಹಲವು ಪ್ರಕರಣಗಳಲ್ಲಿ ತಂಗಿ ಭಾಗಿಯಾಗಿದ್ದಾಳೆ. ಅವಳಿಗೆ ಯಾವುದೇ ಸ್ಥಿರ ಉದ್ಯೋಗವಿಲ್ಲ. ಆದರೂ ಐಷರಾಮಿ ಜೀವನ ನಡೆಸುತ್ತಾಳೆ. ಆಕೆಗೆ ಹಣ ಎಲ್ಲಿಂದ ಬರುತ್ತದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆದರೆ ಸತ್ಯ ಹೊರಬರುತ್ತದೆ” ಎಂದು ಹೇಳಿದ್ದಾರೆ.
ಇದೇ ವೇಳೆ, ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸುಮತಿ ನಾಯ್ಕ್ ವಿರುದ್ಧ ವೇಶ್ಯಾವಾಟಿಕೆ ಪ್ರಕರಣ ದಾಖಲಾಗಿರುವುದಾಗಿ ಪ್ರಪುಲ್ಲ ನಾಯ್ಕ್ ತಿಳಿಸಿದ್ದಾರೆ. ಬಿಟಿಎಂ ಲೇಔಟ್ನ ಕೆಎಎಸ್ ಕಾಲೋನಿಯಲ್ಲಿರುವ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಗ್ರಾಹಕರನ್ನು ಆಕರ್ಷಿಸಿದ ಆರೋಪದ ಮೇರೆಗೆ ಸುಮತಿ ನಾಯ್ಕ್ ಮತ್ತು ಕಾರ್ತಿಕೇಯನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣವು ಈಗ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆರೋಪ-ಪ್ರತ್ಯಾರೋಪಗಳ ನಡುವೆ ಸತ್ಯಾಸತ್ಯತೆ ಹೊರಬರಲು ಪೊಲೀಸರು ಸಮಗ್ರ ತನಿಖೆ ನಡೆಸಬೇಕಿದೆ.

