ವಿಟ್ಲ: ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೋರ್ವರೊಂದಿಗೆ ಅನುಚಿತವಾಗಿ ವರ್ತಿಸಿ ಜಾತಿ ನಿಂದನೆ ಮಾಡಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2022ರ ಅಕ್ಟೋಬರ್ 7ರಂದು ಘಟನೆ ನಡೆದಿದ್ದು, ಅಕ್ಟೋಬರ್ 11ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರು ಪ್ರಕರಣದ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಲ್ಲಿ ನಡೆಯಿತು. 2026ರ ಫೆಬ್ರವರಿ 20ರಂದು ನ್ಯಾಯಾಲಯ ಆರೋಪಿ ಉಸ್ಮಾನ್ ಅವರನ್ನು IPC ಕಲಂ 354, 506 ಹಾಗೂ SC/ST (ಅತ್ಯಾಚಾರ ನಿರೋಧಕ) ಕಾಯ್ದೆಯ ಕಲಂ 3(1)(w), 3(2)(va) ಅಡಿಯಲ್ಲಿ ದೋಷಿ ಎಂದು ಘೋಷಿಸಿತು.
ನ್ಯಾಯಾಲಯವು IPC 354 ಹಾಗೂ ಸಂಬಂಧಿತ SC/ST ಕಾಯ್ದೆಯ ಕಲಂಗಳಡಿ ಒಂದು ವರ್ಷದ ಸರಳ ಜೈಲು ಶಿಕ್ಷೆ ಮತ್ತು ರೂ.10,000 ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. IPC 506 ಕಲಂ ಅಡಿಯಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ಮತ್ತು ರೂ.5,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಹೆಚ್ಚುವರಿ 15 ದಿನಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯ್ಕ ವಾದ ಮಂಡಿಸಿದ್ದರು.



