ಪುತ್ತೂರು, ಫೆ.21: ಹೈಕೋರ್ಟ್ ನಿರ್ದೇಶನದ ಮೇರೆಗೆ ಪುತ್ತೂರು ನಗರದಲ್ಲಿರುವ ಕೋವಿ (ಬಂದೂಕು) ಠೇವಣಾತಿ ಕೇಂದ್ರದ ಮೇಲೆ ಅಧಿಕಾರಿಗಳ ತಂಡ ಶುಕ್ರವಾರ ದಿಢೀರ್ ದಾಳಿ ನಡೆಸಿ 1500ಕ್ಕೂ ಅಧಿಕ ಬಂದೂಕುಗಳನ್ನು ಪತ್ತೆ ಹಚ್ಚಿದೆ. ಕಾರ್ಯಾಚರಣೆಗೆ ಉಪವಿಭಾಗಾಧಿಕಾರಿ (ಎಸಿ) ಸ್ಟೆಲ್ಲಾ ವರ್ಗೀಸ್ ನೇತೃತ್ವ ವಹಿಸಿದ್ದರು.
ನಗರ ಪೊಲೀಸ್ ಠಾಣೆ ಸಮೀಪದ ದೇವಕಿಕೃಪಾ ಕಟ್ಟಡದ ಮೇಲಂತಸ್ತಿನ ಎರಡು ಕೊಠಡಿಗಳು ಹಾಗೂ ಪಕ್ಕದಲ್ಲಿರುವ ಎಸ್ಬಿಬಿ ಟವರ್ನ ಒಂದು ಕೊಠಡಿಯಲ್ಲಿ ಬಂದೂಕುಗಳನ್ನು ಸಂಗ್ರಹಿಸಲಾಗಿತ್ತು. ಮಧ್ಯಾಹ್ನದಿಂದ ಸಂಜೆವರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ ತಂಡ, ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 83ರ ಅಡಿ ತನಿಖೆ ಆರಂಭಿಸಿದ್ದು, ಸಂಬಂಧಿತ ಕೊಠಡಿಗಳನ್ನು ಸೀಲ್ ಮಾಡಲಾಗಿದೆ.
ಎಸಿ ಸ್ಟೆಲ್ಲಾ ವರ್ಗೀಸ್ ಮಾಧ್ಯಮಗಳಿಗೆ ಮಾಹಿತಿ ನೀಡಿ, “ಕೇಂದ್ರದಲ್ಲಿ 1500ಕ್ಕೂ ಹೆಚ್ಚು ಕೋವಿಗಳು ಪತ್ತೆಯಾಗಿವೆ. ಮದ್ದುಗುಂಡುಗಳ ನಿಖರ ಪ್ರಮಾಣದ ಕುರಿತು ಎರಡು ದಿನಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪರವಾನಗಿ ಗೋಪಾಲಕೃಷ್ಣ ಭಟ್ ಹಾಗೂ ವಿವೇಕಾನಂದ ಭಟ್ ಅವರ ಹೆಸರಿನಲ್ಲಿ ಇರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಎಲ್ಲಾ ಅಂಶಗಳನ್ನೂ ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಸುಮಾರು 40 ವರ್ಷಗಳ ಹಿಂದಿನ ಬಂದೂಕುಗಳೂ ಕೇಂದ್ರದಲ್ಲಿ ಸಂಗ್ರಹವಾಗಿರುವುದು ಬೆಳಕಿಗೆ ಬಂದಿದೆ. ಪರವಾನಗಿಯಲ್ಲಿ ನಮೂದಿಸಿದ ಕೊಠಡಿಗಳಿಗಿಂತ ಹೆಚ್ಚಿನ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಿರುವುದು ಹಾಗೂ ಅಗತ್ಯ ದಾಖಲೆಗಳು ಲಭ್ಯವಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಈ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್, ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಕಂದಾಯ ಅಧಿಕಾರಿ ದಯಾನಂದ ಸೇರಿದಂತೆ ಹಲವರು ಭಾಗವಹಿಸಿದ್ದರು.
ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಸಂಪೂರ್ಣ ವರದಿ ನಿರೀಕ್ಷೆಯಲ್ಲಿದೆ.
