ಉಡುಪಿ: ಉಡುಪಿ ತಾಲೂಕಿನ ನೇಜಾರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಸುಲೋಚನ ಅವರು ನೀಡಿದ ಗಂಭೀರ ದೂರಿಗೆ ನ್ಯಾಯ ವಿಳಂಬವಾಗುತ್ತಿರುವುದನ್ನು ಖಂಡಿಸಿ, ಪ್ರಕರಣವನ್ನು ಸಿ.ಐ.ಡಿ. ತನಿಖೆಗೆ ಒಪ್ಪಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಆಗ್ರಹಿಸಿದ್ದಾರೆ.
ಫೆಬ್ರವರಿ 9ರಂದು ಉಡುಪಿ ಪತ್ರಿಕಾ ಭವನದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಣಿಪಾಲ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮುಖ್ಯಸ್ಥರಿಂದ ದೌರ್ಜನ್ಯ, ಜಾತಿ ನಿಂದನೆ, ಲೈಂಗಿಕ ಕಿರುಕುಳ ಹಾಗೂ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಸಂತ್ರಸ್ತೆಯ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತೆ ಮನೆ ರಿಪೇರಿಗಾಗಿ ಸಾಲ ಪಡೆಯಲು ತೆರಳಿದ ಸಂದರ್ಭದಲ್ಲಿ ಖಾತೆ ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ಅಕ್ರಮ ವ್ಯವಹಾರಕ್ಕೆ ಒತ್ತಾಯಿಸಲಾಗಿದೆ, ವಿರೋಧಿಸಿದಾಗ ಸುಳ್ಳು ಪ್ರಕರಣದ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲಾಗಿದೆ ಹಾಗೂ ಫೆಬ್ರವರಿ 6ರಂದು ಮನೆಗೆ ನುಗ್ಗಿ ಜಾತಿ ನಿಂದನೆ ಮತ್ತು ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.
ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಸಂಬಂಧಿತ ಎಲ್ಲಾ ವಿಧಿಗಳಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧನ ಕ್ರಮ ಕೈಗೊಳ್ಳಬೇಕು. ಘಟನೆ ನಡೆದು ಒಂದು ವಾರ ಕಳೆದರೂ ಬಂಧನವಾಗದಿರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ಕೆಲವರು ಆರೋಪಿಯನ್ನು ರಕ್ಷಿಸಲು ಯತ್ನಿಸುತ್ತಿರುವ ಸಾಧ್ಯತೆ ಇರುವುದರಿಂದ, ಸಿ.ಐ.ಡಿ. ತನಿಖೆ ನಡೆಸಿ ಆರೋಪಿತನ ಹಾಗೂ ಸಂಬಂಧಿತ ವ್ಯಕ್ತಿಗಳ ದೂರವಾಣಿ ಕರೆಗಳ ಪರಿಶೀಲನೆ ಮಾಡಬೇಕು. ಮುಂದಿನ ಹಂತದಲ್ಲಿ ರಾಜ್ಯದ ಹಿರಿಯ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಪ್ರಶಾಂತ್ ಭಟ್ ಕಡಬ ತಿಳಿಸಿದ್ದಾರೆ.

