ಕರಾವಳಿಯ ತುಳು ಚಿತ್ರರಂಗ ಹಾಗೂ ರಂಗಭೂಮಿ ಕಲಾವಿದರ ಬಹುನಿರೀಕ್ಷಿತ ‘ದಶ ಯಾತ್ರೆ’ ಸಂಭ್ರಮೋತ್ಸವ ಫೆಬ್ರವರಿ 11ರಿಂದ 15ರವರೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಐದು ದಿನಗಳ ಈ ಉತ್ಸವದಲ್ಲಿ ಕ್ರಿಕೆಟ್ ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕರ ಸನ್ಮಾನ ಸಮಾರಂಭಗಳು ಪ್ರಮುಖ ಆಕರ್ಷಣೆಯಾಗಿವೆ ಎಂದು ಕೋಸ್ಟಲ್ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ.)ದ ಅಧ್ಯಕ್ಷ ಲಂಚುಲಾಲ್ ಕೆ.ಎಸ್. ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ಸವದ ವಿವರಗಳನ್ನು ಕಮಿಟಿ ಸದಸ್ಯ ಜಿತೇಶ್ ಉಳಿಯ ವಿವರಿಸಿ, ಕೋಸ್ಟಲ್ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿರುವ ಈ ಸಂಭ್ರಮದಲ್ಲಿ ತುಳು ಚಿತ್ರರಂಗ ಹಾಗೂ ರಂಗಭೂಮಿ ಕಲಾವಿದರಿಗಾಗಿ ವಿಶೇಷವಾಗಿ ಕ್ರಿಕೆಟ್ ಹಬ್ಬವನ್ನು ರೂಪಿಸಲಾಗಿದೆ. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 7.30ರಿಂದ ರಾತ್ರಿ 11ರವರೆಗೆ ಪಂದ್ಯಾಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಉದ್ಘಾಟನಾ ಸಮಾರಂಭ ಫೆಬ್ರವರಿ 11ರಂದು ಸಂಜೆ 5.30ಕ್ಕೆ ನೆಹರೂ ಮೈದಾನದಲ್ಲಿ ನಡೆಯಲಿದ್ದು, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ವಿಠಲ ಶೆಟ್ಟಿ ಫೌಂಡೇಶನ್ ಸ್ಥಾಪಕ ರಾಕೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮಾಜಿ ಶಾಸಕ ಮೊಯ್ದಿನ್ ಬಾವ ಸೇರಿದಂತೆ ಅನೇಕ ರಾಜಕೀಯ ನಾಯಕರು ಹಾಗೂ ತುಳು ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೋಸ್ಟಲ್ವುಡ್ ಒಕ್ಕೂಟದ ಮಾಜಿ ಅಧ್ಯಕ್ಷರಾದ ಪಮ್ಮಿ ಕೋಡಿಯಾಲ್ ಬೈಲ್, ಮೋಹನ್ ಕೊಪ್ಪಳ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಬೆದ್ರ, ಖಜಾಂಚಿ ಅನಿಲ್ ಕರ್ಕೇರ ಉಪಸ್ಥಿತರಿದ್ದರು.

